ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
ಬೆಳಗಾವಿ: ಪ್ರವಾಹ ಹಾಗೂ ಅತಿವೃಷ್ಟಿಯಂತಹ ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಜನರ ರಕ್ಷಣೆ ಹಾಗೂ ತಾತ್ಕಾಲಿಕ ಪುನರ್ವಸತಿಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎಂ.ಜಿ. ಹಿರೇಮಠ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಸಕ್ತ ಸಾಲಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ ಮಳೆಗಾಲ ಸಾಮಾನ್ಯವಾಗಿ ಇರಲಿದೆ ಎಂಬ ವರದಿಗಳಿವೆ. ಆದಾಗ್ಯೂ ನಾವು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕಿದೆ.
ಹವಾಮಾನ ಇಲಾಖೆಯು ಕಾಲಕಾಲಕ್ಕೆ ಮುನ್ಸೂಚನೆ ಹಾಗೂ ಹವಾಮಾನ ವರದಿಯನ್ನು ನೀಡಲಿದೆ. ಈ ವರದಿಯನ್ನು ಆಧರಿಸಿ ಸಂಬಂಧಿಸಿದ ಅಧಿಕಾರಿಗಳು ತಮಗೆ ವಹಿಸಲಾದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳಲ್ಲಿ ಪ್ರವಾಹ ನಿರ್ವಹಣೆಯಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸಲಾಗಿದೆ. ಈ ಬಾರಿ ಕೂಡ ಅದೇ ರೀತಿಯಲ್ಲಿ ತಂಡಗಳನ್ನು ರಚಿಸಲಾಗುವುದು.
ತಂಡಗಳನ್ನು ರಚಿಸಿದ ಬಳಿಕ ಅಧಿಕಾರಿಗಳು ಹಾಗೂ ತಂಡದ ಕರ್ತವ್ಯಗಳನ್ನು ಪಟ್ಟಿ ಮಾಡಿ ಸಮಗ್ರ ಮಾಹಿತಿಯನ್ನು ಹೊಂದಿರುವ ಬುಕ್ ಲೆಟ್ ಗಳನ್ನು ಸಿದ್ಧಪಡಿಸಿ ಪ್ರತಿ ತಾಲ್ಲೂಕಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಿದರು.
ಕಳೆದ ಬಾರಿಯಂತೆ ಆಯಾ ಸ್ಥಳಗಳಲ್ಲಿಯೇ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗುವುದು. ಬೋಟ್ ಗಳನ್ನು ಕೂಡ ಮುಂಚಿತವಾಗಿ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು.
ತುರ್ತು ಸಂದರ್ಭಗಳಲ್ಲಿ ನದಿತೀರದ ಜನರನ್ನು ಮುಂಚಿತವಾಗಿಯೇ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಅಗತ್ಯವಿರುವ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜಿಲ್ಲೆಗೆ ಅಗತ್ಯವಿರುವ ಬೋಟ್ ಗಳ ಕುರಿತು ಎಲ್ಲ ಉಪ ವಿಭಾಗಾಧಿಕಾರಿಗಳು ಕೂಡಲೇ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ತುರ್ತು ಸಂದರ್ಭದಲ್ಲಿ ಜನರನ್ನು ಸ್ಥಳಾಂತರಿಸಲು ಹಾಗೂ ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಸಿಬ್ಬಂದಿ ಮತ್ತು ಸ್ವಯಂಸೇವಾ ಸಂಸ್ಥೆಗಳ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
24X7 ಕಂಟ್ರೋಲ್ ರೂಮ್ ಸ್ಥಾಪನೆಗೆ ಕ್ರಮ:
ತುರ್ತು ಸಂದರ್ಭದಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗೆ ಅನುಕೂಲವಾಗುವಂತೆ ಮತ್ತು ಸಾರ್ವಜನಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲು ಎಲ್ಲ ತಾಲ್ಲೂಕು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 24X7 ಕಂಟ್ರೋಲ್ ರೂಮ್ ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದರು.
ಈ ಕಂಟ್ರೋಲ್ ರೂಮ್ ಗಳು ಜಿಲ್ಲಾಮಟ್ಟದ ಕಂಟ್ರೋಲ್ ರೂಮ್ ಜತೆಗೆ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು. ಸಂಬಂಧಿಸಿದ ನೋಡಲ್ ಅಧಿಕಾರಿಗಳು ತಮಗೆ ನಿಯೋಜಿಸಲಾದ ತಾಲ್ಲೂಕುಗಳಿಗೆ ತೆರಳಿ ತಾಲ್ಲೂಕು ಮಟ್ಟದಲ್ಲಿ ಸಭೆಯನ್ನು ನಡೆಸುವ ಮೂಲಕ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾಹಿತಿಯನ್ನು ನೀಡಬೇಕು ಎಂದರು.
ಜನ-ಜಾನುವಾರುಗಳಿಗೆ ಅಗತ್ಯ ಔಷಧ ಸಂಗ್ರಹಕ್ಕೆ ನಿರ್ದೇಶನ:
ಪ್ರವಾಹ ಹಾಗೂ ಅತಿವೃಷ್ಟಿ ಬಳಿಕ ಅನೇಕ ಬಗೆಯ ಸಾಂಕ್ರಾಮಿಕ ರೋಗಗಳು ಕಂಡುಬರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಜನರು ಮತ್ತು ಜಾನುವಾರುಗಳಿಗೆ ಅಗತ್ಯವಿರುವ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಇದಲ್ಲದೇ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ರೈತ ಕುಟುಂಬಗಳ ಜಾನುವಾರುಗಳಿಗೂ ಮೇವು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು.
ಬಳ್ಳಾರಿ ಮತ್ತಿತರ ನಾಲಾಗಳ ಸ್ವಚ್ಛತೆಗೆ ಕ್ರಮ:
ನದಿ ತೀರಗಳು ಮಾತ್ರವಲ್ಲದೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇರುವ ನಾಲಾ ಹಾಗೂ ದೊಡ್ಡ ದೊಡ್ಡ ಗಟಾರುಗಳನ್ನು ಸ್ವಚ್ಛತೆ ಮಾಡುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲಿದೆ. ಆದ್ದರಿಂದ ನಾಲಾ-ಗಟಾರುಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿಹಿರೇಮಠ ತಿಳಿಸಿದರು. ಇದೇ ರೀತಿ ಪ್ರವಾಹ ಸಂದರ್ಭದಲ್ಲಿ ಬಳ್ಳಾರಿ ನಾಲಾದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಇದನ್ನೂ ಸಹ ಸ್ವಚ್ಛಗೊಳಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಲಾಶಯ ಮಟ್ಟದ ಮೇಲೆ ನಿರಂತರ ನಿಗಾ:
ಜಿಲ್ಲೆಯ ಹಾಗೂ ನೆರೆಯ ಮಹಾರಾಷ್ಟ್ರದ ಜಲಾಶಯಗಳ ಅಧಿಕಾರಿಗಳ ಜತೆ ನಿರಂತರ ಸಂಪರ್ಕವಿಟ್ಟುಕೊಂಡು ಜಲಾಶಯ ಮಟ್ಟ ಹಾಗೂ ನೀರು ಬಿಡುಗಡೆ ಬಗ್ಗೆ ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಲಾಶಯಗಳಿಂದ ನೀರು ಬಿಡುಗಡೆ ಕುರಿತು ಮುಂಚಿತವಾಗಿಯೇ ಜನರಿಗೆ ತಿಳಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಇದರಿಂದ ಸಮಸ್ಯೆಗಳು ಉಂಟಾಗದಂತೆ ತಡೆಗಟ್ಟಬಹುದು. ಎಂದರು.
ಕೋವಿಡ್ ಮಾರ್ಗಸೂಚಿ ಪಾಲನೆಗೆ ಸೂಚನೆ:
ಈ ಬಾರಿ ಕೋವಿಡ್ ಸೋಂಕು ಕೂಡ ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕೇಂದ್ರ ನಿರ್ವಹಣೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು. ಪರಿಹಾರ ಕೇಂದ್ರಗಳಲ್ಲಿ ಸೂಕ್ತ ಅಂತರ ಕಾಯ್ದುಕೊಳ್ಳುವುದು; ಮಾಸ್ಕ್, ಸ್ಯಾನಿಟೈಸರ್ ವಿತರಣೆಗೆ ಕ್ರಮ ವಹಿಸಬೇಕು ಎಂದರು. ಮಳೆಗಾಲದಲ್ಲಿ ರಸ್ತೆಬದಿಯ ಮರಗಳು ಬಿದ್ದು ಸಂಚಾರಕ್ಕೆ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಮಳೆಗಾಲ ಆರಂಭವಾಗುವುದಕ್ಕೆ ಮುಂಚೆಯೇ ಈ ಬಗ್ಗೆ ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅಧಿಕಾರಿಗಳಿಗೆ ತಿಳಿಸಿದರು. ತುರ್ತು ಪರಿಸ್ಥಿತಿಯಲ್ಲಿ ಜನರ ರಕ್ಷಣೆಗೆ ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸೇನೆಯ ಅಧಿಕಾರಿಗಳು ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಅವರು ಸಭೆಯನ್ನು ನಿರ್ವಹಿಸಿದರು. ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತರಾದ ವಿಕ್ರಮ್ ಆಮಟೆ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್, ಲೋಕೋಪಯೋಗಿ ಇಲಾಖೆ, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ಆರೋಗ್ಯ, ಪಶುಪಾಲನೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.