ಚಿಕ್ಕಮಗಳೂರು: ದೇವರಿಗೆ ಹರಕೆ ಹೊತ್ತುಕೊಳ್ಳುವ ಭಕ್ತರು ನಾನಾ ರೀತಿ ಹರಕೆ ತೀರಿಸಿ ಭಕ್ತಿ ಸಮರ್ಪಿಸುತ್ತಾರೆ. ಅದೇ ರೀತಿ ನಗರದಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ದೇಹವನ್ನ ದಂಡಿಸಿ ಭಕ್ತಿ ಸಮರ್ಪಿಸಿದ್ದಾರೆ. ನಗರದಲ್ಲಿ ಇವತ್ತು ಕರುಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಿತು. ಈ ಜಾತ್ರೆಯಲ್ಲಿ ಹರಕೆ ಹೊತ್ತಿದ್ದ ಭಕ್ತರು ಬೆನ್ನಿಗೆ ಕಬ್ಬಿಣದ ಕೊಂಡಿಗಳುಳ್ಳ ಸರಪಳಿಯನ್ನ ಹಾಕಿಕೊಂಡು ಟ್ರ್ಯಾಕ್ಟರ್, ಲಾರಿ, ಕಾರು, ಆಟೋಗಳನ್ನ ಎಳೆದು ಭಕ್ತಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ. ದೇವರಿಗೆ ಉಪವಾಸವಿದ್ದು ಅಥವಾ ಮುಡಿ ನೀಡಿ ವಿಶಿಷ್ಟ ರೀತಿಯ ಅಡುಗೆಯನ್ನ ಮಾಡಿ ದೇವರಿಗೆ ನೈವೇದ್ಯ ಮಾಡಿ ಹರಕೆ ತೀರಿಸುವುದು ವಾಡಿಕೆ
ಆದರೆ ನಗರದ ಕರುಮಾರಿಯಮ್ಮನ ಭಕ್ತರು ಈ ರೀತಿ ದೇಹವನ್ನ ದಂಡಿಸಿ ದೇವಿಗೆ ಹರಕೆ ತೀರಿಸುತ್ತಾರೆ.
ಈ ಬಾರಿ ಇಪ್ಪತ್ತಾರು ಜನರು ವಿಭಿನ್ನವಾಗಿ ತಮ್ಮ ಹರಕೆ ತೀರಿಸಿದ್ದಾರೆ. ಜಾತ್ರೆ ಹಿನ್ನೆಲೆ ಶುಕ್ರವಾರ ಬೆಳಗ್ಗೆ ದಂಟರಮಕ್ಕಿಯ ಕೆರೆಕೋಡಿಯಮ್ಮನ ಸನ್ನಿಧಿಯಲ್ಲಿ ಕರಗ ಪೂಜೆ ನೆರವೇರಿಸಿದರು. ಬಳಿಕ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಮೂರು,ನಾಲ್ಕು ಕೊಂಡಿಗಳನ್ನು ಹಾಕಿಕೊಂಡು ಟ್ರ್ಯಾಕ್ಟರ್, ಆಟೋ, ಕಾರು, ಮಿನಿ ಲಾರಿಯಂತಹ ಬೃಹತ್ ವಾಹನಗಳನ್ನು ಕೆರೆಕೋಡಿಯಮ್ಮ ದೇವಸ್ಥಾನದಿಂದ ಕರುಮಾರಿಯಮ್ಮ ದೇವಸ್ಥಾನದವರೆಗೆ ಎಳೆದುಕೊಂಡು ಹೋಗುವ ಮೂಲಕ ಭಕ್ತಿ ಮೆರೆದರು.
ಈ ವೇಳೆ ಸಂಬಂಧಿಕರು, ಜಾತ್ರೆಯಲ್ಲಿ ಭಾಗವಹಿಸಿದವರು ಗೋವಿಂದ.. ಗೋವಿಂದ’ ಎಂದು ಕೂಗುವ ಮೂಲಕ ಅವರಿಗೆ ಧೈರ್ಯ ತುಂಬುತ್ತಿದ್ದರು. ಈ ವಿಭಿನ್ನ ಆಚರಣೆಗೆ ಅಳಲು ಹಾಕುವುದು ಎಂದು ಸ್ಥಳೀಯರು ಕರೆಯುತ್ತಾರೆ. ಕೆಲವು ಭಕ್ತರು ತಮ್ಮ ಕಾಲು, ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಹಾಕಿಕೊಂಡು ದೇವರ ಕಳಸವನ್ನು ಕುತ್ತಿಗೆಗೆ ಹಾಕಿಕೊಂಡು ವಾಹನದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ನೇತು ಬಿದ್ದಿದ್ದರು.
ಕೆಲವು ಮಕ್ಕಳು ಬಾಯಿಗೆ ಕಬ್ಬಿಣದ ಸರಳುಗಳನ್ನು ಹಾಕಿಕೊಂಡು ಸಾಗಿದರು. ಜಾತ್ರೆ ಹಿನ್ನೆಲೆ ಕಳೆದ ಎರಡು ದಿನದಿಂದ ದೇವಸ್ಥಾನದಲ್ಲಿ ಹಲವು ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ನಡೆದವು.