ಕೂಗು ನಿಮ್ಮದು ಧ್ವನಿ ನಮ್ಮದು

ಅಧಿಕಾರಿಯ ಮೇಲೆ ಮೈಕ್ ಎಸೆದ ಶಾಸಕನಿಗೆ ಮೂರು ವರ್ಷದ ನಂತರ ಮೂರು ತಿಂಗಳು ಜೈಲು ಶಿಕ್ಷೆ

ಮುಂಬೈ: 2019ರ ಸಭೆಯೊಂದರಲ್ಲಿ ಅಧಿಕಾರಿಯ ಮೇಲೆ ಮೈಕ್ ಮತ್ತು ನೀರಿನ ಬಾಟಲಿಗಳನ್ನು ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಮರಾವತಿಯ ಸೆಷನ್ಸ್ ನ್ಯಾಯಾಲಯವು ಮಹಾರಾಷ್ಟ್ರದ ಶಾಸಕ ದೇವೇಂದ್ರ ಭುಯಾರ್‍ಗೆ ಮೂರು ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸಿದೆ. ದೇವೇಂದ್ರ ಭುಯಾರ್ ಜನಪ್ರತಿನಿಧಿ ಆಗಿದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜವಬ್ದಾರಿಯಿಂದ ವರ್ತಿಸುವುದು ಅವರ ಕಾರ್ಯವಾಗಿತ್ತು. ನಾಯಕರನ್ನು ಅಥವಾ ಜನಪ್ರತಿನಿಧಿಗಳನ್ನು ಅವರ ಬೆಂಬಲಿಗರು ಅನುಸರಿಸುತ್ತಾರೆ. ಆದರೆ ಶಾಸಕ ದೇವೇಂದ್ರ ಭುಯಾರ್ ಈ ರೀತಿ ಮಾಡಿರುವುದು ತಪ್ಪು. ಇಂತಹ ಕೃತ್ಯದಿಂದಾಗಿ ಪ್ರಾಮಾಣಿಕ ಅಧಿಕಾರಿಯ ನೈತಿಕತೆಯನ್ನು ಪ್ರಶ್ನಿಸಿದಂತೆ ಆಗುತ್ತದೆ ಹಾಗೂ ಅವರ ಕೆಲಸದಲ್ಲಿ ಅಭದ್ರತೆಯ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

ಅಮರಾವತಿ ಜಿಲ್ಲಾ ಪರಿಷತ್ತಿನ ಸದಸ್ಯರಾಗಿದ್ದ ಸ್ವಾಭಿಮಾನಿ ಪಕ್ಷ ಪಕ್ಷದ ಶಾಸಕ ದೇವೇಂದ್ರ ಭೂಯಾರ್ ಅವರು 2019ರ ಮೇ 28 ರಂದು ನಡೆದ ಸಭೆಯೊಂದರಲ್ಲಿ ಅಧಿಕಾರಿಯ ಮೇಲೆ ಮೈಕ್ ಮತ್ತು ನೀರಿನ ಬಾಟಲಿಗಳನ್ನು ಎಸೆದಿದ್ದರು. ಇದರ ಪರಿಣಾಮವಾಗಿ ಸಭೆಯಲ್ಲಿ ಗೊಂದಲ ಉಂಟಾಗಿ ತಕ್ಷಣ ಸಭೆ ಮುಕ್ತಾಯಗೊಂಡಿತ್ತು. ಘಟನೆ ಸಂಬಂಧಿಸಿದಂತೆ ಸಭೆಯನ್ನು ಕರೆದಿದ್ದ ಅಧಿಕಾರಿಯು ಗಡ್ಗೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಶಾಸಕರಿಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಅಭ್ಯಾಸವಿದೆ. ಈ ಹಿಂದೆ ಇದೇ ರೀತಿ ಅಪರಾಧಕ್ಕಾಗಿ ನ್ಯಾಯಾಲಯ ಇವರಿಗೆ ಶಿಕ್ಷೆ ವಿಧಿಸಿತ್ತು.

ಜನಪ್ರತಿನಿಧಿಯಾಗಿ ಈ ರೀತಿಯ ನಡುವಳಿಕೆಯೂ ಯೋಗ್ಯವಾಗಿಲ್ಲ ಎಂದು ಶಿಕ್ಷೆ ವಿಧಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್‍ಎಸ್ ಅಡ್ಕರ್ ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ. 2013ರ ಫೆ.27ರಂದು ಜೋಳ ಮಾರಾಟಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ದೇವೇಂದ್ರ ಭುಯಾರ್ ಹಲ್ಲೆ ನಡೆಸಿದ್ದರು. ಆ ಸಮಯದಲ್ಲೂ ಇದೇ ಸೆಕ್ಷನ್‍ಗಳ ಅಡಿಯಲ್ಲಿ ವರುದ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಆ ಪ್ರಕರಣದಲ್ಲಿ, ಅವರಿಗೆ ಮೂರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.

error: Content is protected !!