ಬಳ್ಳಾರಿ: ಸ್ನೇಹಿತರ ಜೊತೆಯಲ್ಲಿ ಹಳ್ಳದಲ್ಲಿ ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಾಟೂರು ಗ್ರಾಮದಲ್ಲಿ ನಡೆದಿದೆ.
ಯಂಕೋಬ (28) ಸಾವನ್ನಪ್ಪಿದ ಯುವಕ. ಗ್ರಾಮದ ಪಕ್ಕದಲ್ಲಿ ಹಿರಿಯುವ ಹಳ್ಳದಲ್ಲಿ ಮೀನು ಹಿಡಿಯಲು ಹೋದಾಗ ಈ ಘಟನೆ ಸಂಭವಿಸಿದೆ. ಮೊದಲು ತೆಪ್ಪದಲ್ಲಿ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿ ಹಲವಾರು ಮೀನು ಹಿಡಿದು ತಂದಿದ್ದರು. ಹಿಡಿದ ಮೀನನ್ನು ಉಳಿದ ಸ್ನೇಹಿತರು ಹಳ್ಳದ ಪಕ್ಕದಲ್ಲಿ ತೊಳೆಯುತ್ತಾ ಕುಳಿತಿದ್ದರು. ಆಗ ಯಂಕೋಬ ಮತ್ತೆ ತಾನೊಬ್ಬನೇ ಮೀನು ಹಿಡಿಯಲು ತೆಪ್ಪ ತೆಗೆದುಕೊಂಡು ಹಳ್ಳಕ್ಕೆ ಇಳಿದಿದ್ದು, ಹಳ್ಳದಲ್ಲಿನ ನೀರಿನ ರಭಸಕ್ಕೆ ತೆಪ್ಪ ಸಿಲುಕಿ ಯುವಕ ನೀರು ಪಾಲಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.