ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದ ಬಳಿಯಿರುವ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ನೀರಾಪಾಲಾಗಿದ್ದಾರೆ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತರು ಒಂದೇ ಕುಟುಂಬದ ಸದಸ್ಯರಾಗಿದ್ದು ಅವರನ್ನು ಅಭಿ ವೀರ್ಯಾ ನಾಯ್ಕ (13), ಅಶ್ವಿನಿ (14), ಕಾವೇರಿ (18) ಅಪೂರ್ವಾ (18) ಎಂದು ಗುರುತಿಸಲಾಗಿದೆ. ಇವರಲ್ಲಿ ಮೊದಲು ಅಭಿ ಎಂಬಾತ ನೀರಿನ ಬಳಿ ಆಡಲು ಹೋಗಿದ್ದು ಅಕಸ್ಮಾತ್ ಆಗಿ ಕೆರೆಯಲ್ಲಿ ಬಿದ್ದ ಅದನ್ನು ನೋಡಿದ ಆತನ ಮೂವರೂ ಅಕ್ಕಂದಿರು ಕೆರೆಗೆ ಇಳಿದು ಆತನನ್ನು ರಕ್ಷಿಸಲು ಹೋಗಿದ್ದಾರೆ. ಆದರೆ, ಆತನನ್ನು ರಕ್ಷಿಸಲಾಗದೆ ಅಭಿ ಜತೆಗೆ ಮೂವರು ಅಕ್ಕಂದಿರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ, ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದ ಹಿನ್ನೆಲೆಯಲ್ಲಿ, ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿವೆ. ಹಾಗಾಗಿ, ನೀರಿನಲ್ಲಿ ಮುಳುಗುವ ಅವಘಡಗಳು ಜಾಸ್ತಿಯಾಗ ತೊಡಗಿವೆ. ಸೆ. 18ರಂದು ಹರಪನಹಳ್ಳಿ ತಾಲೂಕಿನಲ್ಲಿ ತೆಲಗಿ ಕೆರೆಯಲ್ಲಿ ಈಜಾಡಲು ಹೋಗಿದ್ದ ಇಬ್ಬರು ಯುವಕರು ಮೃತಪಟ್ಟಿದ್ದರು. ರಜೆ ಇದ್ದ ಹಿನ್ನಲೆ ಯುವಕರಿಬ್ಬರು ಕೆರೆಯಲ್ಲಿ ಈಜಾಡಲು ಹೋಗಿದ್ದರು. ಕೆರೆಯಲ್ಲಿ ಕೆಸರು ಇದ್ದಿದ್ದರಿಂದ ಕೆಸರಿನಲ್ಲಿ ಕಾಲು ಸಿಕ್ಕಿಹಾಕಿಕೊಂಡು ಹೊರಬರಲಾಗದೇ ಸಾವಿಗೀಡಾಗಿದ್ದರು. ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಇಬ್ಬರು ಯುವಕರ ಮೃತ ದೇಹಗಳನ್ನು ಮುಳುಗು ತಜ್ಞರು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿತ್ತು