ಚಿಕ್ಕಬಳ್ಳಾಪುರ: ರಸ್ತೆಯ ಮೇಲೆ ಹರಿಯೋ ನೀರಲ್ಲಿ ಕೊಚ್ಚಿ ಹೋಗಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಗಂಗಾಧರ್ ಮೃತದೇಹ ಅರವತ್ತೆರಡು ಗಂಟೆಗಳ ಬಳಿಕ ಪತ್ತೆಯಾಗಿದೆ.
ಕಳೆದ ಶುಕ್ರವಾರ ನವೆಂಬರ್ ಹನ್ನೆರಡರಂದು ಸಂಜೆ ಎಳು ಗಂಟೆ ಸುಮಾರಿಗೆ ರಾಮಪಟ್ಟಣದಿಂದ ಸ್ವಗ್ರಾಮ ನವಿಲುಗುರ್ಕಿಗೆ ತೆರಳುವ ವೇಳೆ ಜಿಗಾನಹಳ್ಳಿ ಬಳಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಲ್ಲಿ ಬೈಕ್ ಸಮೇತ ಗಂಗಾಧರ್ ಕೊಚ್ಚಿ ಹೋಗಿದ್ರು.
ಕಳೆದ ಶುಕ್ರವಾರದಿಂದ ಆಗ್ನಿಶಾಮಕ ದಳ ಸಿಬ್ಬಂದಿ, NDRF ಮತ್ತು SDRF ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದ್ದು, ಇವತ್ತು ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಜಾಗದಿಂದ ನೀರು ಸೇರುವ ಗುಡಿಬಂಡೆ ಅಮಾನಿ ಭೈರಸಾಗರದ ಕೆರೆಯವರೆಗೂ ಇಂಚಿಂಚು ಪರಿಶೀಲನೆ ನಡೆಸಿದ ಸಿಬ್ಬಂದಿಗೆ ಅಮಾನಿ ಭೈರಸಾಗರ ಕೆರೆಯ ಹಿನ್ನೀರಿನ ಪೊದೆಯೊಂದರ ಹತ್ತಿರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.