ಬೆಂಗಳೂರು: ಡಿಸಿಎಂ ಮಗನ ಕಾರ್ ಅಪಘಾತಕ್ಕೊಳಗಾಗಿದೆ ಅಂದಾಗ ಇಂತಹ ಊಹಾಪೋಹಗಳೆಲ್ಲ ಸಹಜ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಪುತ್ರನಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಪುತ್ರ ಚಿದಾನಂದ್ ಮತ್ತು ಆತನ ಸ್ನೇಹಿತರು ಅಂಜನಾದ್ರಿ ಬೆಟ್ಟದಿಂದ ಹಿಂದಿರುಗುವ ವೇಳೆ ಅಪಘಾತ ನಡೆದಿದೆ.
ಚಿದಾನಂದ್ ಫಾರ್ಚೂನರ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ರು. ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರ್ ನಲ್ಲಿ ಗೆಳೆಯರು ಬರುತ್ತಿದ್ರು. ಗೆಳೆಯರಿದ್ದ ಕಾರ್ ಅಪಘಾತವಾಗಿದೆ. ಆಕ್ಸಿಡೆಂಟ್ ಆಗ್ತಿದ್ದಂತೆ ಗೆಳೆಯರು ಫೋನ್ ಮಾಡಿದ್ದರಿಂದ ಚಿದಾನಂದ್ ವಾಪಸ್ಸು ಹೋಗಿದ್ದಾನೆ. ಅವನೇ ಅಂಬ್ಯುಲೆನ್ಸ್ ಗೆ ಫೋನ್ ಮಾಡಿ ಆಸ್ಪತ್ರೆ ಸೇರಿಸಿ ಮನೆಗೆ ಹೋಗಿದ್ದಾನೆ.
ರಾತ್ರಿ ಬೈಕ್ ಸವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಿದರು. ರಾತ್ರಿ ಸಾವು ಆಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಣಮಂತು ನಮ್ಮ ಖಾಯಂ ಡ್ರೈವರ್. ಮಗನ ಕಾರ್ ನಮ್ಮ ಚಾಲಕನೇ ಚಲಾಯಿಸುತ್ತಿದ್ದನು. ಡಿಸಿಎಂ ಮಗ ಅಥವಾ ವಿನಿಸ್ಟರ್ ಪುತ್ರ ಅಂದಾಗ ಈ ರೀತಿ ಊಹಾಪೋಹಗಳೆಲ್ಲ ಸಹಜ ಎಂದು ಹೇಳುವ ಮೂಲಕ ಎಲ್ಲ ಆರೋಪಗಳನ್ನು ಉಪ ಮುಖ್ಯಮಂತ್ರಿಗಳು ತಳ್ಳಿ ಹಾಕಿದರು.
ಮನೆಯ ಹಿರಿಯನನ್ನು ಆ ಕುಟುಂಬ ಕಳೆದುಕೊಂಡಿದೆ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪರಿಹಾರ ಕೊಡುವುದು ನಮ್ಮ ಧರ್ಮ. ಫೋನ್ ನಲ್ಲಿ ಮಾತನಾಡೋದು ಸೂಕ್ತವಲ್ಲ. ನಾನೇ ಖುದ್ದಾಗಿ ಗ್ರಾಮಕ್ಕೆ ತೆರಳಿ ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳುತ್ತೇನೆ ಅಂದ್ರು.