ತುಮಕೂರು: ಕರ್ನಾಟಕ ರಾಜ್ಯದ ಏಕೈಕ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್, 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋ ವಿಚಾರದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಬೇಕೋ? ಬೇಡವೋ? ಎಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದಿರುವ ಸುರೇಶ್, ರಾಜಕೀಯವೇ ಸಾಕು ಎಂಬ ಭಾವನೆ ಬಂದಿದೆ ಎಂದಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಡಿ. ಕೆ. ಸುರೇಶ್, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಸಹೋದರ. ಇದೀಗ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಾಗಿ ವಿಜಯ ಕರ್ನಾಟಕ ವೆಬ್ ಸಹೋದರ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಡಿ. ಕೆ. ಸುರೇಶ್, ಮುಂದಿನ 6 ತಿಂಗಳ ಒಳಗೆ ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಬರಲಿವೆ.
ನಮ್ಮ ಬಳಿ ಈಗ ಸಾಕಷ್ಟು ಸಮಯ ಇಲ್ಲ. ನಾವು ಆದಷ್ಟು ಬೇಗ ಚುನಾವಣೆಗೆ ಸಿದ್ದತೆ ಆರಂಭಿಸಬೇಕು. ಈ ನಡುವೆ, ಕೆಲವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಕುರಿತಾಗಿ ಮಾತನಾಡುತ್ತಿದ್ದಾರೆ. ಆದರೆ, ಈ ಕುರಿತಾಗಿ ನಾನು ಏನನ್ನೂ ತೀರ್ಮಾನ ಮಾಡಿಲ್ಲ. ನಾನು ಸ್ಪರ್ಧಿಸುತ್ತೇನೋ? ಇಲ್ಲವೋ? ಅನ್ನೋದು ನನಗೇ ಗೊತ್ತಿಲ್ಲ. ನಾನಿನ್ನೂ ಗೊಂದಲದಲ್ಲಿ ಇದ್ದೇನೆ. ಏಕೆಂದರೆ ನನಗೆ ರಾಜಕೀಯವೇ ಸಾಕು ಎನಿಸಿಬಿಟ್ಟಿದೆ ಎಂದು ಡಿ. ಕೆ. ಸುರೇಶ್ ವಿವರಿಸಿದರು.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಒಟ್ಟು 28 ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ರಾಜ್ಯದ ಏಕೈಕ ಕಾಂಗ್ರೆಸ್ ಸಂಸದರಾಗಿ ಡಿ. ಕೆ. ಸುರೇಶ್ ಹೊರಹೊಮ್ಮಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯದಲ್ಲಿ 20 ಸ್ಥಾನಗಳನ್ನಾದ್ರೂ ಗೆಲ್ಲಲೇ ಬೇಕೆಂದು ಪಣ ತೊಟ್ಟಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಕಾಂಗ್ರೆಸ್ ಪಕ್ಷ, ಈ ಗೆಲುವಿನ ನಾಗಾಲೋಟವನ್ನು ಲೋಕಸಭಾ ಚುನಾವಣೆಯಲ್ಲೂ ಮುಂದುವರೆಸಲು ಉತ್ಸುಕತೆ ತೋರಿದೆ. ಆದ್ರೆ, ಕಾಂಗ್ರೆಸ್ ಪಕ್ಷದ ಈ ಎಲ್ಲಾ ಧನಾತ್ಮಕ ಬೆಳವಣಿಗೆ ನಡುವೆ ರಾಜ್ಯದ ಏಕೈಕ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್ ವ್ಯತಿರಿಕ್ತ ಹೇಳಿಕೆ ನೀಡಿರೋದು ಹಲವು ಕುತೂಹಲಗಳಿಗೆ ಕಾರಣವಾಗಿದ್ದು, ಚರ್ಚಾಸ್ಪದವಾಗಿದೆ
ಡಿ. ಕೆ. ಸುರೇಶ್ ರಾಜಕೀಯ ಹಾದಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದಲೂ ಡಿ. ಕೆ. ಸುರೇಶ್ ಅವರೇ ಸಂಸದರು. 2013ರಲ್ಲಿ ಆಗಿನ ಸಂಸದರಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದಾಗಿ ಎದುರಾದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಿ. ಕೆ. ಸುರೇಶ್, ಮೊದಲ ಬಾರಿಗೆ ಸಂಸದರಾಗಿದ್ದರು. ಆ ನಂತರ 2014ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಿ. ಕೆ. ಸುರೇಶ್ ಪುನರಾಯ್ಕೆಯಾದರು. ಇದಾದ ಬಳಿಕ 2019ರ ಲೋಕಸಭಾ ಚುನಾವಣೆಯಲ್ಲೂ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ. ಕೆ. ಸುರೇಶ್ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಶ್ವತ್ಥ ನಾರಾಯಣ ಗೌಡ ಅವರ ವಿರುದ್ಧ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಡಿ. ಕೆ. ಸುರೇಶ್ ಜಯಭೇರಿ ಬಾರಿಸಿದ್ದರು.