ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ ಎಚ್ಚರದಿಂದಿರಿ ಎಂದು ಹೈಕಮಾಂಡ್ ನಿಂದ ಸಂದೇಶ ಬಂದ ಕಾರಣ ತಾನೂ ಸಹ ಕನಕಪುರದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಎಂದು ಸಂಸದ ಡಿಕೆ ಸುರೇಶ್ ಹೇಳಿದರು.
ರಾಮನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುರೇಶ್, ಪಕ್ಷದ ವರಿಷ್ಠರಿಗೆ ಲಭ್ಯವಾದ ಮಾಹಿತಿಯ ಪ್ರಕಾರ ದೆಹಲಿಯಲ್ಲಿ ಬಿಜೆಪಿ ಲೀಗಲ್ ಸೆಲ್ ಶಿವಕುಮಾರ್ ಸಲ್ಲಿಸಿದ ಅಫಿಡವಿಟ್ ಗಳನ್ನು ಡೌನ್ಲೋಡ್ ಮಾಡಿಕೊಂಡು, ಅವುಗಳಲ್ಲಿ ತಪ್ಪು ಹುಡುಕುವ ಪ್ರಯತ್ನ ಮಾಡಿತ್ತಂತೆ ಎಂದು ಹೇಳಿದರು. ಶಿವಕುಮಾರ್ ಆಗಲೀ ತಾನಾಗಲೀ ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಸುರೇಶ್ ಹೇಳಿದರು.