ಕೂಗು ನಿಮ್ಮದು ಧ್ವನಿ ನಮ್ಮದು

ಮೈಸೂರು ಬೆಂಗಳೂರು ದಶಪಥ; ಸರ್ವಿಸ್ ರಸ್ತೆ ಆಗುವವರೆಗೂ ಟೋಲ್ ಬೇಡವೆಂದ ಡಿ.ಕೆ.ಶಿ

ಮೈಸೂರು: ಮೈಸೂರು – ಬೆಂಗಳೂರು ದಶಪಥ ರಸ್ತೆಗೆ ಸರ್ವೀಸ್ ರಸ್ತೆ ಎಲ್ಲಿದೆ ಎಂದ ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ವೀಸ್ ರಸ್ತೆ ಆಗುವವರೆಗೂ ಟೋಲ್ ಸಂಗ್ರಹ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ತರಾತುರಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದರೆ ಅದರ ವಿರುದ್ಧ ಕಾಂಗ್ರೆಸ್ ದೊಡ್ಡ ಮಟ್ಟದ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 250 ರೂಪಾಯಿ ಟೋಲ್ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂಬ ವರದಿಗಳ ಬಗ್ಗೆ ಪ್ರಸ್ತಾಪಿಸಿದ ಅವರು, ನಮ್ಮ ಬಳಿ ಆ ರಸ್ತೆಯಲ್ಲಿ ಹೋಗಲು ದುಡ್ಡಿಲ್ಲ. ಸರ್ವೀಸ್ ರಸ್ತೆ ಆಗುವವರೆಗೂ ಟೋಲ್ ಸಂಗ್ರಹಿಸಬಾರದು. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ, ಶ್ರೀನಿವಾಸ್ ಪ್ರಸಾದ್ ಏಕೆ ಮಾತನಾಡುತ್ತಿಲ್ಲ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಟೋಲ್ ಮೊತ್ತ ಹೆಚ್ಚು ಅಥವಾ ಕಡಿಮೆ ಎನ್ನುವುದಕ್ಕಿಂತಲೂ ಚುನಾವಣೆ ಬಂತೆಂದು ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಪರ್ಯಾಯ ರಸ್ತೆ ಮಾಡಿದ ನಂತರ ದುಡ್ಡು ಸಂಗ್ರಹಕ್ಕೆ ಮುಂದಾಗಿ. ಪ್ರಧಾನಿ ನರೇಂದ್ರ ಮೋದಿ ಅಥವಾ ಬೇರೆ ಯಾರೇ ಬರಲಿ. ರಸ್ತೆಯಲ್ಲೇ ಬಿದ್ದು ಒದ್ದಾಡಲಿ ನಾವು ಬೇಡ ಎನ್ನುವುದಿಲ್ಲ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಹಿಂದೆ ಮೈಸೂರನ್ನು ಪ್ಯಾರಿಸ್ ಮಾದರಿಯಲ್ಲಿ ಅಭಿವೃದ್ದಿ ಮಾಡುವ ಬಗ್ಗೆ ಪ್ರಧಾನಿ ಭರವಸೆ ನೀಡಿದ್ದ ವಿಚಾರ ಪ್ರಸ್ತಾಪಿಸಿದ ಅವರು, ಪ್ಯಾರಿಸ್ ಮಾದರಿ ಒಂದು ರಸ್ತೆ ಮಾಡಿಸಿ ಕೊಡಿ ಸಾಕು ಎಂದು ಹೇಳಿದ್ದಾರೆ. ಜತೆಗೆ ಬಿಜೆಪಿ ವಚನ ಭ್ರಷ್ಟ ಸರ್ಕಾರ, 40% ಕಮಿಷನ್ ಸರ್ಕಾರ ಎಂದು ಟೀಕಿಸಿದ್ದಾರೆ.

ಅಶ್ವಥ್ ನಾರಾಯಣ ಹೇಳಿಕೆಗೆ ತಿರುಗೇಟು
‘ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕೋಣ’ ಎಂಬ ಸಚಿವ ಅಶ್ವಥ್ ನಾರಾಯಣ ಹೇಳಿಕೆಗೆ ಬೊಮ್ಮಾಯಿ‌, ಯಡಿಯೂರಪ್ಪ ಉತ್ತರಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಟಗರಾ, ತಲೆ ತೆಗೆಯಲು? ಆ ಬಚ್ಚಲು ವಿಚಾರ ಹೇಳಿ ನನ್ನ ಬಾಯಿ ಬಚ್ಚಲು ಮಾಡಿಸಿಕೊಳ್ಳುವುದಿಲ್ಲ. ಟಿಪ್ಪು ಬಗ್ಗೆ ರಾಷ್ಟ್ರಪತಿಗಳು ಸದನದಲ್ಲಿ ಏನು ಹೇಳಿದ್ದಾರೆಂಬ ದಾಖಲೆ ಇದೆ. ಅಶ್ವಥ್ ನಾರಾಯಣ ಮಾತನಾಡಿದ ಬಗ್ಗೆ ಜನ ನಿರ್ಧಾರ ಮಾಡಲಿ ಎಂದು ಅವರು ಹೇಳಿದ್ದಾರೆ.

error: Content is protected !!