ಭುವನೇಶ್ವರ: ‘ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು, ಜನರ ಚೀರಾಟ, ಆರ್ತನಾದ, ಮತ್ತೊಂದೆಡೆ ಮೃತದೇಹಗಳ ರಾಶಿ. ಇವುಗಳನ್ನು ನೋಡಿ ಒಂದು ಕ್ಷಣ ಸ್ತಂಭೀಭೂತರಾಗಿ ಹೋದೆವು’. ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದ ಹೃದಯ ವಿದ್ರಾವಕ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳ ನೋವಿನ ನುಡಿಗಳಿವು. ಶುಕ್ರವಾರ ಸಂಜೆ 6.30- 7 ರ ಸುಮಾರಿಗೆ ರೈಲಿನಲ್ಲಿ ಇಡೀ ಪ್ರಯಾಣಿಕರ ಕಲರವ. ಕೆಲವೆಡೆ ಹಿರಿಯರ ಮಾತುಗಳು, ಕೆಲವೆಡೆ ಮಕ್ಕಳ ನಗು. ಊಟಕ್ಕೆ ಏನು ಆರ್ಡರ್ ಮಾಡಬೇಕೆಂಬ ಚರ್ಚೆ. ಒಟ್ಟಿನಲ್ಲಿ ಶಾಲಿಮಾರ್‌ನಿಂದ ಚೆನ್ನೈ ಸೆಂಟ್ರಲ್‌ಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಒಳಗೆ ಸಂಭ್ರಮದ ವಾತಾವರಣವಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯಬಾರದ ಬಲು ದೊಡ್ಡ ದುರಂತವೊಂದು ಘಟಿಸಲಿದೆ ಎಂಬ ತೃಣಮಾತ್ರದ ಸುಳಿವೂ ಇರದಿದ್ದ ಪ್ರಯಾಣಿಕರೆಲ್ಲ ಹಾಯಾಗಿ ಪ್ರಯಾಣವನ್ನು ಆಸ್ವಾದಿಸುತ್ತಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ನಡೆದದ್ದೇ ಬೇರೆ. ಭೀಕರ ದುರಂತದ ಬಗ್ಗೆ ರೈಲಿನಲ್ಲಿದ್ದ 19 ವರ್ಷದ ಯುವಕ ನಿವಾಸ್ ಕುಮಾರ್ ವಿವರಿಸಿದ್ದು ಹೀಗೆ
ಅಪಘಾತ ಸಂಭವಿಸಿದ್ದು ಹೇಗೆ?
ಮಾಧ್ಯಮ ಪ್ರತಿನಿಧಿಗಳು ಈ ಪ್ರಶ್ನೆ ಕೇಳುತ್ತಿದ್ದಂತೆಯೇ ನಿವಾಸ್ ಕುಮಾರ್ ಮುಖದಲ್ಲಿ ಅವ್ಯಕ್ತವಾದ ಆತಂಕದ ಗೆರೆಯೊಂದು ಸುಳಿದಂತಾಯಿತು. ಗಂಟಲು ಒಣಗಿತು. ಒಂದು ಕ್ಷಣ ಕಣ್ಣು ಮುಚ್ಚಿದ ಆತ ನಂತರ ವಿವರಿಸತೊಡಗಿದ.
ಅಜ್ಜನ ಜೊತೆ ಹೌರಾದಿಂದ ಬಿಹಾರಕ್ಕೆ ಹೋಗುತ್ತಿದ್ದೆ. ಸ್ವಲ್ಪ ಸಮಯದ ಹಿಂದೆ, ಎಲ್ಲವೂ ತುಂಬಾ ಚೆನ್ನಾಗಿತ್ತು. ಮಕ್ಕಳು ಆಡುತ್ತಿದ್ದರು, ಜನರು ಮಾತನಾಡುತ್ತಿದ್ದರು. ಯಾರೋ ಶಾಂತವಾಗಿ ಮಲಗಿದ್ದರು. ಇದ್ದಕ್ಕಿದ್ದಂತೆ ಒಂದು ಚಂಡಮಾರುತ ಬಂದಪ್ಪಳಿಸಿದಂತೆ ಭಾಸವಾಯಿತು. ನಂತರ ದೊಡ್ಡ ಶಬ್ದ ಕೇಳಿಸಿತು. ಕಿವಿಗಳು ಮರಗಟ್ಟಿದವು ಮತ್ತು ಕಣ್ಣುಗಳು ಮುಚ್ಚಿಹೋದವು. ಸ್ವಲ್ಪ ಹೊತ್ತಿನ ನಂತರ ಕಣ್ಣು ತೆರೆದಾಗ ಭಯಾನಕ ದೃಶ್ಯ ಕಾಣಿಸಿತು. ಸುತ್ತಲೂ ಮೃತದೇಹಗಳ ರಾಶಿ ಬಿದ್ದಿತ್ತು. ಮಕ್ಕಳ ಕಿಲಕಿಲ ನಗುವಿನ ಬದಲು ಜನರ ಕಿರುಚಾಟದ ಸದ್ದು ಕೇಳಿಸುತ್ತಿತ್ತು. ಕೆಲವೆಡೆ ಹಿರಿಯರ ಕನ್ನಡಕ, ಕೆಲವೆಡೆ ಮಕ್ಕಳ ಬಟ್ಟೆ, ಆಟಿಕೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಆಂಬುಲೆನ್ಸ್‌ನ ಸೈರನ್, ಜನರ ಕಿರುಚಾಟ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಅಪಘಾತ ಸಂಭವಿಸಿದ ತಕ್ಷಣ ಪ್ರಜ್ಞೆ ತಪ್ಪಿಹೋಯಿತು ಎಂದು ನಿವಾಸ್ ನೋವಿನಿಂದ ಹೇಳಿದರು.