ಶಿವಮೊಗ್ಗ: ಮುಸ್ಲಿಂ ಯುವತಿಯನ್ನು ಬೈಕಿನಲ್ಲಿ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ವಿಶ್ವೇಶ್ವರಯ್ಯ ನಗರದ ಹಿಂದೂ ಯುವಕ ಹಾಗೂ ಖಲಂದರ್ ನಗರದ ಮುಸ್ಲಿಂ ಯುವತಿ ಇಬ್ಬರೂ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಮುಸ್ಲಿಂ ವಿದ್ಯಾರ್ಥಿನಿಯ ಸಹೋದರಿಗೆ ಅಪಘಾತ ಸಂಭವಿಸಿ ಗಾಯಗೊಂಡಿದ್ದ ವಿಷಯ ತಿಳಿದ ನಂತರ ಆಕೆ ತನ್ನ ಸಹಪಾಠಿ ಹಿಂದೂ ಯುವಕನಿಂದ ಬೈಕ್‌ನಲ್ಲಿ ತನ್ನ ಮನೆಗೆ ಡ್ರಾಪ್ ಪಡೆದಿದ್ದಳು.
ಡ್ರಾಪ್ ನೀಡಿ ವಾಪಸ್ಸಾಗುತ್ತಿದ್ದ ವೇಳೆ ಝಂಡಾಕಟ್ಟೆ ಬಳಿ ಮುಸ್ಲಿಂ ಯುವಕರ ಗುಂಪು ಹಿಂದೂ ಯುವಕನನ್ನು ಅಡ್ಡ ಹಾಕಿದೆ. ನಿನ್ನ ಹೆಸರೇನು ಎಂದು ಪ್ರಶ್ನೆ ಮಾಡಿದ್ದು, ಆತ ಹೆಸರು ಹೇಳುತ್ತಿದ್ದ ಹಾಗೆಯೇ ನಮ್ಮ ಯುವತಿಯನ್ನು ನೀನು ಬೈಕ್‌ನಲ್ಲಿ ಏಕೆ ಕೂರಿಸಿಕೊಂಡು ಬಂದೆ ಎಂದು ಪ್ರಶ್ನಿಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹಿಂದು ಯುವಕನ ಇಬ್ಬರು ಸ್ನೇಹಿತರ ಮೇಲೆಯೂ ಗುಂಪು ಹಲ್ಲೆ ನಡೆಸಿದೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಗಲಾಟೆ ಬಿಡಿಸಿ ಕಳುಹಿಸಿದ್ದಾರೆ. ಗಲಾಟೆ ಬಿಡಿಸಿದ ಸ್ಥಳೀಯರಿಗೂ ಮುಸ್ಲಿಂ ಯುವಕರ ಗುಂಪು ಬೆದರಿಕೆ ಹಾಕಿದೆ ಎನ್ನಲಾಗಿದೆ. ಘಟನೆ ಕುರಿತು ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.