ಕೂಗು ನಿಮ್ಮದು ಧ್ವನಿ ನಮ್ಮದು

CCB ಪೊಲೀಸರೆಂದು ಹೇಳಿಕೊಂಡು ಶೂ ವ್ಯಾಪಾರಿ ಬಳಿ ಹತ್ತು ಲಕ್ಷ ದರೋಡೆ

ಬೆಂಗಳೂರು: CCB ಪೊಲೀಸರ ವೇಷದಲ್ಲಿ ನಾಲ್ವರು ದುಷ್ಕರ್ಮಿಗಳು ಶೂ ವ್ಯಾಪಾರಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿ ಹತ್ತು ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಟನ್‌ಪೇಟೆ ಪೊಲೀಸ್‌ ರಸ್ತೆ ನಿವಾಸಿ ಮೂಲರಾಮ್‌(37) ಹಣ ಕಳೆದುಕೊಂಡಿದ್ದಾರೆ. ಮೈಸೂರು ರಸ್ತೆಯ ಸಿರ್ಸಿ ವೃತ್ತದ ಬಳಿ ಜ.13ರಂದು ರಾತ್ರಿ 7.45ರ ಸಮಾರಿಗೆ ಈ ಘಟನೆ ನಡೆದಿದೆ. ದರೋಡೆಗೆ ಒಳಗಾದ ಮೂಲರಾಮ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಭಾರತ ಮೂಲದ ಮೂಲರಾಮ್‌ ಹಲವು ವರ್ಷಗಳಿಂದ ನಗರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಮನವರ್ತಪೇಟೆಯಲ್ಲಿ ‘ಮೆಟ್ರೋ ಶೂ ಏಜೆನ್ಸಿ’ ಹೆಸರಿನ ಅಂಗಡಿ ತೆರೆದಿದ್ದಾರೆ. ಮೂಲರಾಮ್‌ ಅವರ ಪಕ್ಕದ ಊರಿನ ರಮೇಶ್‌ ಎಂಬುವವರು ನಗರದಲ್ಲಿ ಬಟ್ಟೆವ್ಯಾಪಾರ ಮಾಡಿಕೊಂಡಿದ್ದಾರೆ. ಇದರ ಜತೆಗೆ ಮೂಲರಾಮ್‌ ಸೇರಿದಂತೆ ಪರಿಚಿತ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಡ್ಡಿಗೆ ಹಣ ನೀಡುತ್ತಾರೆ. ಅವರು ನೀಡಿದ ಹಣವನ್ನು ಮೂಲರಾಮ್‌ ಸಂಗ್ರಹಿಸಿ ವಾಪಾಸ್‌ ನೀಡುತ್ತಿದ್ದರು.

ಬ್ಲೇಡ್‌ನಿಂದ ಕೈಗಳಿಗೆ ಹಲ್ಲೆ:

ಅದರಂತೆ ರಮೇಶ್‌ ಜ.13ರಂದು ಸಂಜೆ 4.30ಕ್ಕೆ ಮೂಲರಾಮ್‌ಗೆ ಕರೆ ಮಾಡಿ ಕೆಲವು ವ್ಯಾಪಾರಿಗಳಿಂದ ಹಣ ಸಂಗ್ರಹಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಹೀಗಾಗಿ ಮೂಲರಾಮ್‌ ಕೆಲ ವ್ಯಾಪಾರಿಗಳಿಂದ ಒಟ್ಟು ಹತ್ತು ಲಕ್ಷ ಸಂಗ್ರಹಿಸಿ ಅದನ್ನು ರಮೇಶ್‌ಗೆ ತಲುಪಿಸಲು ಬ್ಯಾಗ್‌ನಲ್ಲಿ ಹಣ ಇರಿಸಿಕೊಂಡು ಸಂಜೆ 7.45ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್‌ ಬಳಿ ಹೋಗುತ್ತಿದ್ದರು.

ಹಿಂದಿನಿಂದ 2 ದ್ವಿಚಕ್ರ ವಾಹನದಲ್ಲಿ ಬಂದಿರುವ ನಾಲ್ವರು ದುಷ್ಕರ್ಮಿಗಳು, ನಾವು ಸಿಸಿಬಿ ಪೊಲೀಸರು, ದ್ವಿಚಕ್ರ ವಾಹನ ನಿಲ್ಲಿಸು ಎಂದು ಅಡ್ಡಹಾಕಿದ್ದಾರೆ. ಮೂಲರಾಮ್‌ನಿಂದ ಹಣವಿದ್ದ ಬ್ಯಾಗ್‌ ಕಸಿದುಕೊಂಡಿದ್ದಾರೆ. ಮತ್ತಿಬ್ಬರು ದುಷ್ಕರ್ಮಿಗಳು ಮೂಲರಾಮ್‌ ಕುತ್ತಿಗೆಗೆ ಕೈನಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಬ್ಲೇಡ್‌ನಿಂದ ಮೂಲರಾಮ್‌ಗೆ ಕೈಗಳನ್ನು ಕೊಯ್ದು ನಾಲ್ವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

error: Content is protected !!