ಮಂಗಳೂರು: ಕಮೀಷನರೇಟ್‌ನ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಮಿತ್ತೊಟ್ಟು ಪ್ರದೇಶದಲ್ಲಿ ಇತ್ತೀಚೆಗೆ ವಿಚಿತ್ರ ಕಳ್ಳತನ ಪ್ರಕರಣವೊಂದು ನಡೆದಿತ್ತು. ಒಂಟಿ ಮಹಿಳೆಯ ಮನೆಗೆ ಇಬ್ರು ಕಳ್ಳರು ನುಗ್ಗಿ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದರು. ಸಂತ್ರಸ್ತ ಮಹಿಳೆ ಸುಮತಿ ಆಚಾರ್ಯ ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆರಂಭದಲ್ಲೇ ಇದು ಪರಿಚಿತರ ಕೃತ್ಯ ಅನ್ನೋ ಸುಳಿವು ಸಿಕ್ಕಿತ್ತು. ತನಿಖೆಯ ಭಾಗವಾಗಿ ಸ್ಥಳೀಯ ಸಿ.ಸಿ ಕ್ಯಾಮಾರ ಚೆಕ್ ಮಾಡಿದಾಗ ಕೃತ್ಯ ಎಸಗಿ ಇಬ್ಬರು ಪರಾರಿಯಾಗಿರುವುದು ರೆಕಾರ್ಡ್ ಆಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ಅಳಿಯನೇ ಈ ಕಳ್ಳತನ ಕೃತ್ಯ ನಡೆಸಿರುವುದು ಪತ್ತೆಯಾಗಿದೆ. ಸದ್ಯ ದೂರು ಕೊಟ್ಟಿರೋ ಮಹಿಳೆಯ ಅಳಿಯ ವಿನಯ್ ಕುಮಾರ್, ಆತನ ಜೊತೆಗಿದ್ದ ಮಣಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿನಯ್ ಕುಮಾರ್ ಸುರತ್ಕಲ್‌ನ ಕೃಷ್ಣಾಪುರ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆ ಅಳಿಯ ವಿನಯ್ ಕುಮಾರ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇಬ್ಬರು ಆರೋಪಿಗಳು ಏಕಾಏಕಿ ಮನೆಯೊಳಗೆ ನುಗ್ಗಿ ಸುಮತಿ ಆಚಾರ್ಯರ ಬಾಯಿಗೆ ಬಟ್ಟೆಕಟ್ಟಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಳೆದು ಏಸ್ಕೇಪ್ ಆಗಿದ್ದರು. ಸದ್ಯ ಇಬ್ಬರು ಆರೋಪಿಗಳಿಂದ 60 ಸಾವಿರ ಮೌಲ್ಯದ 32 ಗ್ರಾಂ ತೂಕದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ.