ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳಗೊಂಡಿದ್ದು, ಮತ್ತೆ 2 ಸಾವಿರದ ಗಡಿ ದಾಟಿದೆ. ಶುಕ್ರವಾರ ಕರ್ನಾಟಕ ರಾಜ್ಯದಲ್ಲಿ ಒಟ್ಟು 2,032 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ, ಕರ್ನಾಟಕ ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 40,28,117 ಕ್ಕೆ ಏರಿಕೆ ಕಂಡಿದೆ. ಶುಕ್ರವಾರ ಕೂಡಾ ರಾಜ್ಯಾದ್ಯಂತ 1,686 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 39,77,541 ಕ್ಕೆ ಏರಿಕೆಯಾಗಿದೆ.
ಸದ್ಯ ಕರ್ನಾಟಕ ರಾಜ್ಯಾದ್ಯಂತ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 10,395ಕ್ಕೆ ಏರಿಕೆ ಕಂಡಿದೆ. ಚಿಕಿತ್ಸೆ ಫಲಿಸದೇ ಶುಕ್ರವಾರ ಕೂಡಾ ಐವರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಇಲ್ಲಿಯವರೆಗೆ ಕೋವಿಡ್ಗೆ ಬಲಿಯಾದವರ ಒಟ್ಟು ಸಂಖ್ಯೆ 40,139ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನ ಲೆಕ್ಕಾಚಾರ: ಕರ್ನಾಟಕ ರಾಜ್ಯಾದ್ಯಂತ ಪತ್ತೆಯಾದ ಒಟ್ಟು ಪ್ರಕರಣಗಳ ಪೈಕಿ ಬೆಂಗಳೂರಿಗೇ ಸಿಂಹ ಪಾಲು. ರಾಜಧಾನಿಯಲ್ಲಿ ಶುಕ್ರವಾರ ಕೂಡಾ ಹೊಸ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಶುಕ್ರವಾರ ಒಟ್ಟು 1,202 ಹೊಸ ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯಲ್ಲಿ ದೃಢಪಟ್ಟಿವೆ.
ಸಮಾಧಾನಕರ ಸಂಗತಿ ಎಂದರೆ, ಒಟ್ಟು 1,145 ಮಂದಿ ಸೋಂಕಿತರು ಶುಕ್ರವಾರ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ, ರಾಜಧಾನಿಯಲ್ಲಿ ಸದ್ಯ 7,102 ಸಕ್ರಿಯ ಪ್ರಕರಣಗಳು ಇವೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ: ಮತ್ತೆ ಕೊರೊನಾ ಮಾರ್ಗಸೂಚಿ ಬಿಡುಗಡೆಗೆ ಸಿದ್ಧತೆ! ಜಿಲ್ಲಾವಾರು ಲೆಕ್ಕಾಚಾರ: ಬಾಗಲಕೋಟೆ 18, ಬಳ್ಳಾರಿ 63, ಬೆಳಗಾವಿ 45, ಬೆಂಗಳೂರು ಗ್ರಾಮಾಂತರ 60, ಚಾಮರಾಜನಗರ 17, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 01, ಚಿತ್ರದುರ್ಗ 06, ದಕ್ಷಿಣ ಕನ್ನಡ 14, ದಾವಣಗೆರೆ 39, ಧಾರವಾಡ 75, ಗದಗ 01, ಹಾಸನ 77, ಹಾವೇರಿ 12, ಕಲಬುರಗಿ 34, ಕೊಡಗು 25, ಕೋಲಾರ 36, ಕೊಪ್ಪಳ 15, ಮಂಡ್ಯ 31, ಮೈಸೂರು 132, ರಾಯಚೂರು 35, ರಾಮನಗರ 17, ಶಿವಮೊಗ್ಗ 29, ತುಮಕೂರು 13, ಉಡುಪಿ 07, ಉತ್ತರಕನ್ನಡ 12, ವಿಜಯಪುರ 01, ಯಾದಗಿರಿ ಜಿಲ್ಲೆಯಲ್ಲಿ 03 ಪ್ರಕರಣಗಳು ದೃಢಪಟ್ಟಿದ್ದು ಬೀದರ್ ಜಿಲ್ಲೆಯಲ್ಲಿ ಶುಕ್ರವಾರ ಯಾವುದೇ ಪ್ರಕರಣ ವರದಿಯಾಗಿಲ್ಲ.
ರಾಜ್ಯಾದ್ಯಂತ ಉಚಿತ ಬೂಸ್ಟರ್ ಡೋಸ್ಗೆ ಚಾಲನೆ: ಶುಕ್ರವಾರ ಆಗಸ್ಟ್ 12 ರಿಂದ ರಾಜ್ಯಾದ್ಯಂತ ಕೋವಿಡ್ ಬೂಸ್ಟರ್ ಡೋಸ್ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಕೊರ್ಬೆವ್ಯಾಕ್ಸ್ ಕೊರೊನಾ ಲಸಿಕೆ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಕೊರ್ಬೆವ್ಯಾಕ್ಸ್ ಭಾರತದ ದೇಸಿ ಲಸಿಕೆಯಾಗಿದ್ದು, ಮೊದಲ ಎರಡು ಡೋಸ್ ಸಂದರ್ಭದಲ್ಲಿ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರೂ ಮೂರನೇ ಡೋಸ್ ಸಂದರ್ಭದಲ್ಲಿ ಕೊರ್ಬೆವ್ಯಾಕ್ಸ್ ಲಸಿಕೆ ಪಡೆಯಬಹುದಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.