ಬೆಂಗಳೂರು: ಕಾಂಗ್ರೆಸ್ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾದರೆ ಅದಕ್ಕೆ ಅವರೇ ಹೊಣೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ. ನಗರದಲ್ಲಿಂದು ಕಾಂಗ್ರೆಸ್ನವರಿಂದ ರಾಜಭವನ ಚಲೋ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಆದರೆ ಅದಕ್ಕೆ ಅವರೇ ಹೊಣೆ. ಕಾಂಗ್ರೆಸ್ನವರೇ ನೈತಿಕ ಹೊಣೆ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಪ್ರತಿಭಟನೆ ಮಾಡುವುದಾದರೆ ಫ್ರೀಡಂಪಾರ್ಕ್ನಲ್ಲಿ ಮಾಡಲಿ, ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಅವರಿಂದು ರಾಜಭವನ ಚಲೋ ಮಾಡ್ತಿದ್ದಾರೆ.
ಇಂದಿನ ಹೋರಾಟಕ್ಕೆ ಕೋವಿಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ವಿವರಿಸಿದ್ದಾರೆ. ಇದೇ ವೇಳೆ ಶಾಲೆಗಳಲ್ಲಿ ಕೋವಿಡ್ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಒಂದೆರಡು ಶಾಲೆಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಆ ಶಾಲಾ ಮಕ್ಕಳಿಗೆ ರಜೆ ಕೊಟ್ಟಿದ್ದಾರೆ. ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ವಿದ್ಯಾರ್ಥಿಗಳಿಗೆ ಬರುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗಳಲ್ಲಿ ಎಲ್ಲ ನಿಯಮ ಪಾಲನೆ ಮಾಡ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.