ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತಿಯ ಬಿಜೆಪಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮಹತ್ವದ ಘಟ್ಟ ತಲುಪಿದೆ. ನಿನ್ನೆಯಷ್ಟೆ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಸಿಬಿಐ, ಪ್ರಕರಣದ ದೀರ್ಘ ಆಳಕ್ಕೆ ಇಳಿದಿದೆ. ಮತ್ತೊಂದೆಡೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಕುಲಕರ್ಣಿ ಕುಟುಂಬವನ್ನು ಹಣಿಯಲು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ನೇರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದೆ. ಇದೆಲ್ಲದರ ಮಧ್ಯೆ ಲಿಂಗಾಯತ ಸ್ವಾಮೀಜಿಗಳು ವಿನಯ ಬೆನ್ನಿಗೆ ನಿಂತಿದ್ದಾರೆ.
ರಾಜ್ಯಾಧ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಯೋಗೀಶಗೌಡ ಕೊಲೆ ಪ್ರಕರಣದ ಸಿಬಿಐ ತನಿಖೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ನಿನ್ನೆಯಷ್ಟೆ ಸುಧೀರ್ಘ ವಿಚಾರಣೆ ನಡೆಸಿ ಸಂಜೆ ವೇಳೆಗೆ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು ಬಂಧಿಸಿದ್ದ ಸಿಬಿಐ, ವಿನಯ ಲ ಕುಲಕರ್ಣಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಈ ನಡುವೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜಕೀಯವಾಗಿ ಬೆಳೆಯುತ್ತಿದ್ದ ವಿನಯ ಕುಲಕರ್ಣಿಯನ್ನು ಸಂಬಂಧಪಡದ ಕೇಸಿನಲ್ಲಿ ಸಿಲುಕಿಸಲಾಗಿದೆ. ಇದರ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನೇರ ಕೈವಾಡವಿದೆ ಎಂದು ವಿನಯ ಸಹೋದರ ವಿಜಯ ಕುಲಕರ್ಣಿ ಆರೋಪಿಸಿದ್ದಾರೆ.
ವಿನಯ ಕುಲಕರ್ಣಿ ಬಂಧನ ಖಂಡಿಸಿರುವ ವಿವಿಧ ಮಠಾಧೀಶರು, ವಿನಯ ಬೆನ್ನಿಗೆ ನಿಂತಿದ್ದಾರೆ. ರಾಜಕೀಯ ದ್ವೇಷದಿಂದ ಈ ರೀತಿ ಮಾಡಲಾಗಿದೆ, ಸಿಬಿಐ ತನಿಖೆ, ನಿಷ್ಪಕ್ಷಪಾತವಾಗಿ ನಡೆಯಲಿ. ಯಾವುದೇ ರಾಜಕೀಯ ನಾಯಕರ ಪ್ರಭಾವಕ್ಕೆ ಮಣಿಯದೇ ತನಿಖೆ ನಡೆಯಲಿ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದ್ದಾರೆ. ನಿನ್ನೇ ವಿಚಾರಣೆ ನಡೆಸಿ ಸಂಜೆ ವಾಪಸ್ ಕಳಿಸಿದ್ದ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಹಾಗೂ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಮತ್ತು ವಿನಯ್ ಆಪ್ತ ಸಹಾಯಕರಾಗಿದ್ದ ಸೋಮು ನ್ಯಾಮಗೌಡಾರನ್ನು ಇಂದು ಮತ್ತೇ ಸಿಬಿಐ ವಿಚಾರಣೆ ನಡೆಸಿತು. ಈ ಮಧ್ಯೆ ವಿನಯ ಕುಲಕರ್ಣಿ ಮನೆಗೆ ಭೇಟಿ ನೀಡಿದ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ತ್ಯುಂಜಯ ಸ್ವಾಮೀಗಳು, ಕುಟುಂಬದವರಿಗೆ ಧೈರ್ಯ ಹೇಳಿದರು. ಎಲ್ಲ ಶ್ರೀಗಳು ವಿನಯ ಕುಲಕರ್ಣಿ ಜೊತೆಗೆ ಇದ್ದೆವೆ. ತನಿಖೆ ನ್ಯಾಯಸಮ್ಮತವಾಗಿ, ನಿಷ್ಪಕ್ಷವಾಗಿ ನಡೆಯಲಿ ಎಂದು ಆಗ್ರಹಿಸಿದ್ದಾರೆ. ವಿನಯ ಕುಲಕರ್ಣಿಯವರು ಸಮಾಜದ ಮುಖಂಡರಾಗಿದ್ದು, ಅವರು ನಿರಪರಾಧಿಗಳಾಗಿ ಹೊರಬರುತ್ತಾರೆ ಎಂದು ಕೂಡಲಸಂಗಮದ ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿಯವರನ್ನು ಬಂಧಿಸುತ್ತಿದ್ದಂತೆ, ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಮಾಹಿತಿ ಕಲೆ ಹಾಕಲು ವಿನಯ ಕುಲಕರ್ಣಿಗೆ ಮೂರು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ಮನವಿ ಮಾಡಿದೆ. ಸಿಬಿಐ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿನಯ್ ಕುಲಕರ್ಣಿಯನ್ನು ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿದೆ. ಸಧ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿಯನ್ನು ನಾಳೆ ಬೆಳಿಗ್ಗೆ 7.30ಕ್ಕೆ ಸಿಬಿಐ ವಶಕ್ಕೆ ಪಡೆದು ಕರೆದೊಯ್ಯಲಿದ್ದಾರೆ.