ಕೂಗು ನಿಮ್ಮದು ಧ್ವನಿ ನಮ್ಮದು

ಪರಿಷತ್ ಚುನಾವಣೆ – ಅತೀ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅವಕಾಶ ನೀಡಿ: ಎಮ್.ಸಿ. ವೇಣುಗೋಪಾಲ್ ಒತ್ತಾಯ

ಬೆಂಗಳೂರು: ಮುಂಬರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಮ್.ಸಿ. ವೇಣುಗೋಪಾಲ್ ಅವರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನ ಪರಿಷತ್ ನ ಏಳು ಸ್ಥಾನಗಳಿಗೆ ಜೂನ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಮೂರು ರಾಜಕೀಯ ಪಕ್ಷಗಳು ಅತಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಅತಿ ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿಪಡಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸ್ವಾತಂತ್ರ ಬಂದ ಈ ಏಳುವರೆ ದಶಕದಲ್ಲಿ ಅತಿ ಹಿಂದುಳಿದ ವರ್ಗಗಳ ಸುಮಾರು 197 ಸಮುದಾಯಗಳು ರಾಜಕೀಯ ಅವಕಾಶಗಳಿಂದ ವಂಚಿತವಾಗಿವೆ. ಪ್ರಸ್ತುತ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗ 1995ಕ್ಕಿಂತ ಹಿಂದೆ ಸಲ್ಲಿಸಿದ ವರದಿಯನ್ನು ಆಧರಿಸಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿಲ್ಲ ಎಂದು ಆಯೋಗ ತನ್ನ ವರದಿಯಲ್ಲಿ ಸೇರಿಸದೇ ಕೈಬಿಟ್ಟ ಕೆಲವು ಜಾತಿ, ಉಪಜಾತಿಗಳನ್ನು ಸರ್ಕಾರ ಸ್ವಯಂ ಪ್ರೇರಣೆಯಿಂದಲೋ, ಒತ್ತಡಕ್ಕೆ ಒಳಗಾಗಿಯೋ ಸೇರ್ಪಡೆ ಮಾಡಿರುವುದರಿಂದ ಅರ್ಹ ಹಿಂದುಳಿದ ವರ್ಗಗಳಿಗೆ ಘೋರ ಅನ್ಯಾಯವಾಗಿದೆ. ಅನ್ಯಾಯದ ಫಲವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅರ್ಹ ಹಿಂದುಳಿದ ವರ್ಗಗಳಿಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ ಕೋಟ ಸಿಗದೆ ಸಂವಿಧಾನದ ಆಶಯ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ 1952 ರಿಂದ 2022ರ ವರೆಗಿನ 70 ವರ್ಷದಲ್ಲಿ ವಿಧಾನ ಪರಿಷತ್‍ನಲ್ಲಿ ದೊರೆತ 802 ಅವಕಾಶಗಳ ಪೈಕಿ ಪ್ರಬಲ ಸಮುದಾಯದವರೇ ಪರಿಷತ್ ಸದಸ್ಯತ್ವದ ಸಿಂಹಪಾಲು ಪಡೆದಿದ್ದಾರೆ. ಅಚ್ಚರಿಯಾಗಬಹುದಾದ ಅಧಿಕೃತ ವಿವರ ಈ ಕೆಳಕಂಡಂತಿದೆ. ಲಿಂಗಾಯತರು – 141, ಒಕ್ಕಲಿಗ -158, ಬ್ರಾಹ್ಮಣ -91, ಪ.ಜಾ -65, ಮುಸ್ಲಿಂ -54, ಕುರುಬ-20, ಪ.ಪಂ -18, ಈಡಿಗ -18, ಕೊಡವ -15, ಜೈನ್-14, ಬಂಟ -14, ಬಲಿಜ-13, ಕ್ರೈಸ್ತ -12, ಮರಾಠ -12, ಬೆಸ್ತ -11, ವೈಶ್ಯ-10, ರೆಡ್ಡಿ-9, ಗಾಣಿಗ-6, ದೇವಾಂಗ-5, ವಿಶ್ವಕರ್ಮ-4, ಉಪ್ಪಾರ-3, ನಾಯ್ಡು, ತಿಗಳ, ಮಡಿವಾಳ, ಹಿಂದೂ ಸಾದರು, ರಾಜು ಕ್ಷತ್ರಿಯ, ಭಂಡಾರಿ – ತಲಾ 2, ಗೊಲ್ಲ, ಕುಂಬಾರ, ರಜಪೂತ್, ಮುದಲಿಯಾರ್, ಅರಸು, ದೇವಳಿ, ಸಿಂಧಿ, ಭಾವಸಾರ ಕ್ಷತ್ರಿಯ, ಸವಿತಾ – ತಲಾ 1 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಎಮ್. ಸಿ. ವೇಣುಗೋಪಾಲ್ ಅವರು ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದ್ರು.

ಪ್ರಸ್ತುತ, ವಿಧಾನಪರಿಷತ್ತಿನ 74 ಸದಸ್ಯರ ಸಮುದಾಯದ ವಿವರ ಹೀಗಿದೆ: ಒಕ್ಕಲಿಗ- 21, ಲಿಂಗಾಯತ -20, ಪ.ಜಾ- 5, ಕುರುಬ- 5, ಪ.ಪಂ, ಮುಸ್ಲಿಂ, ಬೆಸ್ತ – ತಲಾ 3, ಈಡಿಗ -3, ಕೊಡವ, ಬಂಟ, ಬ್ರಾಹ್ಮಣ – ತಲಾ 2, ತಿಗಳ, ವೈಶ್ಯ, ರೆಡ್ಡಿ, ವಿಶ್ವಕರ್ಮ ಮತ್ತು ಜೈನ್ – ತಲಾ 1. ಇವರಲ್ಲಿ ಮುಂಬರುವ ಜೂನ್ ತಿಂಗಳಲ್ಲಿ 7 ಮಂದಿ ಸದಸ್ಯರು ನಿವೃತ್ತರಾಗುತ್ತಿದ್ದಾರೆ ಎಂದರು. ಇವರೆಲ್ಲಾ ವಿಧಾನಸಭಾ ಸದಸ್ಯರಿಂದ ಚುನಾಯಿತರಾದವರು. ಈ ಸ್ಥಾನಗಳನ್ನು ತುಂಬಲು ಜೂನ್ ಮೊದಲವಾರ ಚುನಾವಣೆ ನಡೆಯಲಿದೆ ಎಂದರು.

ಪ್ರಸಕ್ತ ವಿಧಾನ ಸಭೆಯ ಸದಸ್ಯರ ಬಲದಂತೆ ( ಬಿಜೆಪಿ – 4, ಕಾಂಗ್ರೆಸ್- 2 ಮತ್ತು ದಳ – 1) ಚುನಾಯಿತರಾಗುವ ಸಂಭವವಿದೆ. ಹಿಂದುಳಿದ ವರ್ಗಗಳು ಮತ್ತು ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ 46 ಸಮುದಾಯಗಳು ಹೊಂದಿರುವ ಜನಸಂಖ್ಯಾ ಸಾಮರ್ಥ್ಯಕ್ಕೆ ತಕ್ಕಂತೆ ಪರಿಷತ್ತಿನಲ್ಲಿ ಅವುಗಳ ಸಂಖ್ಯೆ ತೀರಾ ಕಡಿಮೆ ಇದೆ. ತಮ್ಮ ಪಕ್ಷದ ವತಿಯಿಂದ ಚುನಾಯಿಸಬಹುದಾದ ಸ್ಥಾನಗಳನ್ನೂ ಹಿಂದುಳಿದ ಮತ್ತು ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ 46 ಸಮುದಾಯಗಳಿಗೆ ಅನ್ವಯಿಸುವಂತೆ ಅವಕಾಶ ಕಲ್ಪಿಸಿಕೊಟ್ಟು ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕೆಂದು ಎಂದು ಅವರು ಮನವಿ ಮಾಡಿದ್ರು.

ಇನ್ನು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ಚುನಾವಣೆ ನಡೆಸುವುದು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಪೂರ್ಣಗೊಂಡ ನಂತರ ನಿರ್ವಾತ ಸೃಷ್ಠಿಯಾಗಲು ಬಿಡದೆ ಚುನಾವಣೆ ನಡೆಸಬೇಕಾಗಿರುವುದು ರಾಜ್ಯಗಳ ಸಾಂವಿಧಾನಿಕ ಹೊಣೆಗಾರಿಕೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‍ಗೆ ಚುನಾವಣೆ ನಡೆಸುವ ಸನ್ನಿವೇಶ ಕರ್ನಾಟಕದಲ್ಲೂ ಎದುರಾಗಿದೆ. ಹಾಗೇ ಯಾವುದೇ ಕ್ಷಣದಲ್ಲೂ ಚುನಾವಣೆ ದಿನಾಂಕ ಘೋಷಣೆಯಾಗುವ ಸಂಭವವಿದೆ. ಈ ಹಂತದಲ್ಲಿ ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಅತಿ ಹಿಂದುಳಿದ ವರ್ಗಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ರು.

ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರವಾಗಿ ನಿಜವಾಗಿಯೂ ಆಸಕ್ತಿ ಮತ್ತು ಕಾಳಜಿ ಇದ್ದಲ್ಲಿ ಸಾಮೂಹಿಕವಾಗಿ ಒಂದು ತೀರ್ಮಾನಕ್ಕೆ ಬಂದು ಓಬಿಸಿ ಮೀಸಲಾತಿಯನ್ನು ಅಭ್ಯರ್ಥಿಯ ಬದಲು ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡಿದಾಗ ಮಾತ್ರ ಕರ್ನಾಟಕದ ಶೇಕಡ 62ಕ್ಕೂ ಹೆಚ್ಚಿರುವ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಬಗ್ಗೆ ಸಾಮಾಜಿಕ ಕಳಕಳಿಯನ್ನು ಕಾಣಬಹುದು ಎಂದು ಅವರು ಹೇಳಿದ್ರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಮ್. ನಾಗರಾಜ್, ಖಜಾಂಚಿ ಎಲ್.ಎ. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!