ಮೈಸೂರು: ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶ ಆಗೋದು ಖಚಿತ ಎಂದು ಮೈಸೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶದ ಆರಂಭವಾಗಿದೆ. ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಉಡುಪಿಯಲ್ಲೇ ಮಾಡಿದ್ದರು. ಆಗ ಸಿದ್ದರಾಮಯ್ಯ ಸಿಎಂ ಅಧಿಕಾರ ಕಳೆದುಕೊಂಡರು, ಚಾಮುಂಡೇಶ್ವರಿಯಲ್ಲೂ ಸೋತರು. ಈಗ ಅಲ್ಲಿಂದಲೇ ಹಿಜಾಬ್ ವಿವಾದ ಆರಂಭವಾಗಿದೆ. ಹಿಜಾಬ್ ವಿವಾದದ ಹಿಂದೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷ ಇದೆ. ಓಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಮುಖಂಡರಿಂದ ಈ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡರು ಮನಸ್ಸು ಮಾಡಿದ್ದರೆ ಸಮಸ್ಯೆ ಬಗರಹರಿಸಬಹುದಿತ್ತು. ಆ ಆರು ಜನ ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ನೀಡಬಹುದಿತ್ತು. ಆದರೆ ಕಾಂಗ್ರೆಸ್‌ಗೆ ಮುಸ್ಲಿಂ ಮತಗಳೇ ಮುಖ್ಯವಾದವು. ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.
ಈ ಹಿಂದೆ ವೀರಶೈವ ಲಿಂಗಾಯತ ಧರ್ಮ, ನಂತರ ಮತಾಂತರದ ವಿಷಯ, ಗೋಹತ್ಯೆ, ಈಗ ಹಿಜಾಬ್ ಅವರ ರಾಜಕೀಯ ವಿಚಾರವಾಗಿದೆ. ಹಿಂದೂ ಮುಸ್ಲಿಂ ಒಡೆದಿದ್ದು ಕಾಂಗ್ರೆಸ್. ಅಪವಾದ ನಮ್ಮ ಮೇಲೆ ಹಾಕುತ್ತೆ ಎಂದು
ಮೈಸೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಇನ್ನು ಮೂರು ತಿಂಗಳು ಈ ವಿಚಾರ ಪ್ರಸ್ತಾಪ ಇಲ್ಲ. ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಇಲ್ಲ. ಈ ಬಗ್ಗೆ ಖುದ್ದು ಸಿಎಂ ಸ್ಪಷ್ಟನೆ ನೀಡಿದ್ದಾರೆ. ಇದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದ ಈಶ್ವರಪ್ಪ, ಈ ಬಗ್ಗೆ ನನಗೆ ಯಾರು ಹೈ ಕಮಾಂಡ್ ನಾಯಕರು ಹೇಳಿಲ್ಲ. ಮಾಧ್ಯಮಗಳಲ್ಲಿ ಬಂದಿರುವದನ್ನು ಓದಿದ್ದೇನೆ. ಈ ವಿಚಾರದಲ್ಲಿ ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ದ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಇದನ್ನು ಹೈ ಕಮಾಂಡ್ ನಾಯಕರು ನಿರ್ಧರಿಸುತ್ತಾರೆ ಎಂದಿದ್ದಾರೆ.