ಬೆಂಗಳೂರು: ನಗರದ ಶಿವಾನಂದ ಸರ್ಕಲ್ ಬಳಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬೇರೆಡೆಗೆ ಕಳುಹಿಸಿದ್ದಾರೆ.ಅಚ್ಛೇ ದಿನ್ ಬರುತ್ತೆ ಎಂದಿದ್ರು ಆದ್ರೆ ಈಗ ನರಕ ತೋರಿಸುತ್ತಿದ್ದಾರೆ
ಇನ್ನು ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಎಐಸಿಸಿ ಸೂಚನೆ ಮೇರೆಗೆ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಖಂಡಿಸಿ ಧರಣಿ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 5 ದಿನಗಳ ಕಾಲ 5,000 ಪೆಟ್ರೋಲ್ ಬಂಕ್ಗಳ ಮುಂದೆ ಪ್ರತಿಭಟನೆ ನಡೆಸುತ್ತೇವೆ. UPA ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ದರ ಹೆಚ್ಚಳವಾಗಿದೆ ಎಂದು ಮೋದಿ ಹೋರಾಟ ನಡೆಸಿದ್ದರು. ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ್ರು. ಅಚ್ಛೇ ದಿನ್ ಬರುತ್ತೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದ್ರೆ ಈಗ ನರಕ ಅಂದ್ರೆ ಏನು ಎಂದು ತೋರಿಸುತ್ತಿದ್ದಾರೆ. ತೈಲ ಬೆಲೆ ಏರಿಕೆಯಾದ್ರೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತೆ. ಸಾಮಾನ್ಯ ಜನರು ಜೀವನ ಮಾಡುವುದಾದರೂ ಹೇಗೆ? ಒಂದು ಕಡೆ ಕೊರೊನಾ ಬಂದಿದೆ. ಲಾಕ್ಡೌನ್ ಹೇರಲಾಗಿದೆ. ಇಂತಹ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುಪಿಎ ಸರ್ಕಾರ ಇದ್ದಾಗ 130 ಡಾಲರ್ ಬ್ಯಾರಲ್ಗೆ ಇತ್ತು. 70 ರೂಪಾಯಿಗೆ ಪೆಟ್ರೋಲ್ ಸಿಗ್ತಾತ್ತು. ಇವಾಗ 70 ಡಾಲರ್ ಬ್ಯಾರಲ್ ಇದೆ. ಆದ್ರೆ ನೂರು ರೂಪಾಯಿಗೆ ಲೀಟಲ್ ಪೆಟ್ರೋಲ್ ಇದೆ. ಇದರ ಜೊತೆ ರಾಜ್ಯದ ತೆರಿಗೆ ಕೂಡ ಇದೆ. ನರೇಂದ್ರ ಮೋದಿ ನಿನಗೆ ನಾಚಿಕೆ ಆಗಲ್ವ. ಜನರ ರಕ್ತ ಹೀರ್ತಾ ಇದ್ದೀರಾ ನಮ್ಮ ರಾಜ್ಯದಿಂದ 1 ಲಕ್ಷ 16 ಸಾವಿರ ಕೋಟಿ ಎಕ್ಸೈಸ್ ಟ್ಯಾಕ್ಸ್ ಹೋಗುತ್ತೆ. 14 ಸಾವಿರ ಕೋಟಿ ಸೆಲ್ಸ್ ಟ್ಯಾಕ್ಸ್ ಹೋಗುತ್ತೆ. ಇಷ್ಟೊಂದು ತೆರಿಗೆ ತೆಗೆದುಕೊಂಡ ಮತ್ತೆ ಪೆಟ್ರೋಲ್ ಮೇಲೆ ತೆರಿಗೆ ಹಾಕಿದ್ದಾರೆ ಎಂದು ಗರಂ ಆಗಿದ್ದಾರೆ. ಬೆಲೆ ಏರಿಸಿ ಜನರ ರಕ್ತ ಕುಡೀತಿದ್ದಾರೆ, ತಿಗಣೆ ತರ ಆಗಿದ್ದಾರೆ. ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆ ಆಗುವುದಿಲ್ಲವೇ? ಜನರಿಗೆ ತಪ್ಪು ಮಾಹಿತಿ, ಸುಳ್ಳು ಹೇಳಿ ಅಧಿಕಾರ ನಡೆಸ್ತಿದ್ದಾರೆ ಎಂದರು. ಬೈಕ್ನಲ್ಲಿ ಓಡಾಡುವ ಯುವಕರು ಅಚ್ಛೇ ದಿನ್ ಬರುತ್ತೇ ಅಂತಿದ್ರು. ಈಗ ಅವರೇ ಶಾಪ ಹಾಕುತ್ತಿದ್ದಾರೆ. ಮೋದಿ ಕೇವಲ ಭಾವನಾತ್ಮಕವಾಗಿ ಮಾತನಾಡ್ತಾರೆ. ಜನರ ದಾರಿ ತಪ್ಪಿಸುತ್ತಿದ್ದಾರೆ. ಕೋಮುವಾದ ಬಿತ್ತುವುದೇ ಬಿಜೆಪಿ ಕೆಲಸ. 19 ಬಾರಿ ಇವರು ಪೆಟ್ರೋಲ್ ಬೆಲೆ ಹೆಚ್ಚಿಸಿದ್ದಾರೆ. ರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 59 ರೂ ಇದೆ. ರಾಮನ ರಾಜ್ಯದಲ್ಲಿ ಪೆಟ್ರೋಲ್ ದರ 100 ರೂ. ಇದೆ. ರಾಮನ ಹೆಸರನ್ನ ಹೇಳ್ತೀರ ನಿಮಗೆ ನಾಚಿಕೆಯಾಗಲ್ವೇ? ಜನಸಾಮಾನ್ಯರ ಕಷ್ಟ ನಿಮಗೆ ಅರ್ಥವಾಗಲ್ವೇ? ಇವತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾವು ಪ್ರತಿಭಟನೆ ಮಾಡ್ತಿದ್ದೇವೆ. ಜನರ ಪರವಾಗಿ ನಾವು ಧ್ವನಿ ಎತ್ತಿದ್ದೇವೆ. ಸರ್ಕಾರವನ್ನ ಎಚ್ಚರಗೊಳಿಸುವ ಕೆಲಸ ಮಾಡ್ತಿದ್ದೇವೆ. ಜನರೂ ಕೂಡ ತಮ್ಮ ಧ್ವನಿಯನ್ನ ಎತ್ತಬೇಕು. ಜಿಡಿಪಿ ದರ ಇಳಿಮುಖವಾಗಿದೆ ಎಂದರು. ಇನ್ನು ಪ್ರತಿಭಟನೆ ವೇಳೆ ಮಾತನಾಡಿದ D.K.ಶಿವಕುಮಾರ್, ಕಾಂಗ್ರೆಸ್ ಎಲ್ಲಾ ಸಮಯದಲ್ಲಿ ಎಲ್ಲಾದಕ್ಕೂ ಸಿದ್ಧವಾಗಿರುತ್ತೆ. ನಾವು ಚುನಾವಣೆಗೂ ರೆಡಿಯಾಗಿದ್ದೇವೆ. ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ. ಅವರು ಬಿದ್ರು, ಇವರು ಬಿದ್ರು ಅಂತ ಕಾಂಗ್ರೆಸ್ ಕಾಯಲ್ಲ. ಮರ ಬಿತ್ತು, ಕೊಂಬೆ ಬಿತ್ತು ಎಂದು ಕಾಯುತ್ತ ಕೂರಲ್ಲ ಎಂದರು.