ಬೆಂಗಳೂರು: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವ ಎಲ್ಲ ಆಕಾಂಕ್ಷಿಗಳು ಪಕ್ಷಕ್ಕೆ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದ್ದು,. ಈ ಹಿನ್ನೆಲೆಯಲ್ಲಿ ಕೊನೆಯ ದಿನವಾದ ಇಂದು ಅತಿ ಹೆಚ್ಚಿನ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಬ ಈವರೆಗೆ ಪಕ್ಷದಿಂದ 1 ಸಾವಿರಕ್ಕೂ ಅಧಿಕ ಅರ್ಜಿಗಳು ವಿತರಣೆ ಆಗಿದ್ದು, ಬೆಳಗ್ಗೆ 11ಗಂಟೆ ವೇಳೆಗೆ 400ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಪಕ್ಷದಿಂದ ಮಾಹಿತಿ ಲಭ್ಯವಾಗಿದೆ.
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆಯನ್ಜು ಆರಂಭಿಸಿಸದ್ದಾರೆ. ಇತ್ತೀಚೆಗೆ ಕಾಂಗ್ರೆಸ್ನ ಅಧ್ಯಕ್ಷರಾಗಿ ಹಲವು ವರ್ಷಗಳ ನಂತರ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಂತರಿಕ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ. ಜತೆಗೆ, ಕಾಂಗ್ರೆಸ್ನಿಂದ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶದಿಂದ ಎಲ್ಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿತ್ತು. ನ.5 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನ.15ರಂದು (ಇಂದು) ಕೊನೆಯ ದಿನವಾಗಿದೆ. ಇಂದು ಹೆಚ್ಚಿನ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದ್ದಾರೆ.
ಈವರೆಗೆ 30 ಶಾಸಕರು ಸೇರಿದಂತೆ 400ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈವರೆಗೆ ಅರ್ಜಿ ಸಲ್ಲಿಸಿದವರ ವಿವರ: ನಂಜನಗೂಡು ಕ್ಷೇತ್ರಕ್ಕೆ ಹೆಚ್.ಸಿ. ಮಹಾದೇವಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಸಲ್ಲಿಕೆ ಮಾಡಿದ್ದಾರೆ. ಪುಲಕೇಶಿ ನಗರ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಪೈಪೋಟಿ ನೀಡಲು ಮಾಜಿ ಶಾಸಕ ಪ್ರಸನ್ನ ಕುಮಾರ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ಅಖಂಡ ಶ್ರೀನಿವಾಸ್ ಮೂರ್ತಿ ಇಂದು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಪುತ್ರಿ ನಯನ ಮೋಟಮ್ಮ ಅವರು ಮೂಡಿಗೆರೆ ಕ್ಷೇತ್ರಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೇ ಕ್ಷೇತ್ರಕ್ಕೆ ನಾಗರತ್ನ, ಬಿನ್ನಾಡಿ ಪ್ರಭಾಕರ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.
ಮಹಿಳಾ ಅಧ್ಯಕ್ಷರಿಂದ 2 ಕಡೆ ಅರ್ಜಿ ಸಲ್ಲಿಕೆ: ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ್ ಅವರು ಮಹದೇವಪುರ ಹಾಗೂ ಸಕಲೇಶಪುರ ಸೇರಿ ಎರಡು ಕ್ಷೇತ್ರಕ್ಕೆ ಅರ್ಜಿ ಹಾಕಿದ್ದಾರೆ. ಕನಕಗಿರಿ ಕ್ಷೇತ್ರಕ್ಕೆ ಮಾಜಿ ಸಚಿವ ಶಿವರಾಜ್ ತಂಗಡಗಿ, ಟಿ. ನರಸೀಪುರ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ಹೆಚ್.ಡಿ ಕೋಟೆಗೆ ಹಾಲಿ ಶಾಸಕ ಅನಿಲ್ ಚಿಕ್ಕಮಾದು, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಐವನ್ ಡಿ ಸೋಜಾ, ಮಂಗಳೂರು ಉತ್ತರ ಕ್ಷೇತ್ರಕ್ಕೆ ಮೋಯ್ದಿನ್ ಭಾವ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಕೋಲಾರದಲ್ಲಿ ಅರ್ಜಿ ಸಲ್ಲಿಕೆಗೆ ಸಂಕಟ: ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಲು ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಟಿಕೆಟ್ ಪಡೆದಿದ್ದರು. ಆದರೆ, ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರ ಪ್ರವಾಸ ಕೈಗೊಂಡಿದ್ದ ವೇಳೆ ತಾವು ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಕೋಲಾರದಲ್ಲಿ ನಾಮಿನೇಷನ್ ಮಾಡಲು ಬಂದೇ ಬರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಮುಂದುವರೆದು ಕಾಂಗ್ರೆಸ್ ಹೈಕಮಾಂಡ್ ತಿಳಿಸಿದರೆ ಕೋಲಾರದಿಂದಲೇ ಸ್ಪರ್ಧಿಸುವುದು ಖಚಿತವೆಂದು ಹೇಳಿದ್ದರು. ಇದರಿಂದ ಈವರೆಗೆ ವಿ.ಆರ್. ಸುದರ್ಶನ ಅವರು ಅರ್ಜಿ ಸಲ್ಲಿಕೆ ಮಾಡಿಲ್ಲ. ಜೊತೆಗೆ ಗೋವಿಂದೇಗೌಡ ಮತ್ತು ಶ್ರೀನಿವಾಸ್ ಎಂಬುವವರು ಕೂಡ ಕೋಲಾರದಿಂದ ಸ್ಪರ್ಧಿಸಲು ಅರ್ಜಿ ಪಡೆದಿದ್ದರು ಎನ್ನಲಾಗಿದೆ. ಮತ್ತೊಂದೆಡೆ ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಈವರೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ.