ಕೂಗು ನಿಮ್ಮದು ಧ್ವನಿ ನಮ್ಮದು

ಹೊಸಬರ ಕೈಹಿಡಿದ ಕಾಂಗ್ರೆಸ್‌ ಅಂತಿಮ ಪಟ್ಟಿಯ ಐವರಲ್ಲಿ ಮೂವರು ಹೊಸ ಮುಖಗಳು

ಬೆಳಗಾವಿ:ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿಸಿಕೊಂಡಿದ್ದ ಕಾಂಗ್ರೆಸ್‌ ಏಪ್ರಿಲ್‌ 15 ರಂದು ಆ ಸ್ಥಾನಗಳಿಗೂ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ. ಈಗ ಬಿಜೆಪಿ, ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳು ಜಿಲ್ಲೆಯ ಎಲ್ಲ 18 ಕ್ಷೇತ್ರಗಳಿಗೆ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದಂತಾಗಿದೆ.

ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ ಮಾಜಿ ಡಿಸಿಎಂ ಲಕ್ಷಣ ಸವದಿಯನ್ನು ಹುರಿಯಾಳು ಮಾಡಿದ್ದರೆ, ಬೆಳಗಾವಿ ಉತ್ತರಕ್ಕೆ ಮಾಜಿ ಶಾಸಕ ಫಿರೋಜ್‌ ಸೇಠ್‌ ಸಹೋದರ ಆಸೀಫ್‌ (ರಾಜು) ಸೇಠ್‌, ಬೆಳಗಾವಿ ದಕ್ಷಿಣಕ್ಕೆ ಪ್ರಭಾವತಿ ಚಾವಡಿ, ಅರಬಾವಿಯಲ್ಲಿಅರವಿಂದ ದಳವಾಯಿ ಮತ್ತು ರಾಯಬಾಗ ಕ್ಷೇತ್ರಕ್ಕೆ ಮಹಾವೀರ ಮೋಹಿತೆ ಹೆಸರು ಘೋಷಣೆಯಾಗಿವೆ. ಇವರಲ್ಲಿ ರಾಜು ಸೇಠ್‌, ಪ್ರಭಾವತಿ ಚಾವಡಿ ಮತ್ತು ಮಹಾವೀರ ಮೋಹಿತೆ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಹೊಸ ಮುಖಗಳು.

ಅರಬಾವಿಗೆ ಅರವಿಂದ
ಈಗಾಗಲೇ ಚನ್ನಮ್ಮನ ಕಿತ್ತೂರು, ನಿಪ್ಪಾಣಿ, ಗೋಕಾಕ್‌ ಕ್ಷೇತ್ರಗಳಲ್ಲಿ ಬಂಡಾಯದ ಹೊಗೆ ಆಡುತ್ತಲೇ ಇರುವಾಗ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು, ಅಥಣಿ, ಅರಬಾವಿ, ರಾಯಬಾಗದ ಟಿಕೆಟ್‌ ವಂಚಿತ ಆಕಾಂಕ್ಷಿಗಳಲ್ಲಿಅಸಮಾಧಾನ ವ್ಯಕ್ತವಾಗುತ್ತಿದೆ. ಅರಬಾವಿಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಸೋಲು ಕಂಡಿದ್ದ ಅರವಿಂದ ದಳವಾಯಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಇಲ್ಲಿ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತು ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಭೀಮಪ್ಪ ಗಡಾದ ಅವರಿಗೆ ನಿರಾಸೆಯಾಗಿದೆ. ಅವಕಾಶ ಸಿಕ್ಕರೆ ಅವರು ಮತ್ತೊಮ್ಮೆ ಜೆಡಿಎಸ್‌ ಅಥವಾ ಪಕ್ಷೇತರ ಸ್ಪರ್ಧಿಸುವ ಸಾಧ್ಯತೆ ಇದೆ.


ಕಲ್ಲೋಳಕರ್‌ ಇಲ್ಲ ಟಿಕೆಟ್‌
ರಾಯಬಾಗದಲ್ಲಿ ಕಾಂಗ್ರೆಸ್‌ನಿಂದ ಚುನಾವಣೆ ಸ್ಪರ್ಧೆಗಾಗಿಯೇ ತಮಿಳುನಾಡಿನ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಬಂದಿದ್ದ ಐಎಎಸ್‌ ಅಧಿಕಾರಿ ಶಂಭು ಕಲ್ಲೋಳಕರ್‌ ಅವರಿಗೆ ಟಿಕೆಟ್‌ ಕೈತಪ್ಪಿದೆ. ತಮಗೇ ಟಿಕೆಟ್‌ ಸಿಗುತ್ತದೆನ್ನುವ ವಿಶ್ವಾಸದಲ್ಲಿ ಕಲ್ಲೋಳಕರ್‌ ಕ್ಷೇತ್ರಾದ್ಯಂತ ಸಾಕಷ್ಟು ಓಡಾಟ ನಡೆಸಿ, ಜನ ಸಂಪರ್ಕ ಬೆಳೆಸಿಕೊಂಡಿದ್ದರು. ಈಗ ಪಕ್ಷದ ಕಾರ್ಯಕರ್ತ ಮಹಾವೀರ ಮೊಹಿತೆಗೆ ಅವಕಾಶ ನೀಡಿರುವುದು ಸೂಕ್ತವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದ್ದರೂ ಕಲ್ಲೋಳಕರ್‌ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

ಉತ್ತರಕ್ಕೆ ರಾಜು, ದಕ್ಷಿಣಕ್ಕೆ ಚಾವಡಿ
ಬೆಳಗಾವಿ ಉತ್ತರದಲ್ಲಿ ನಿರೀಕ್ಷಿಸಿದಂತೆ ಆಸೀಫ್‌ (ರಾಜು) ಸೇಠ್‌ಗೆ ಟಿಕೆಟ್‌ ಸಿಕ್ಕಿದ್ದು, ಬಿಜೆಪಿಯಿಂದ ಟಿಕೆಟ್‌ ತಪ್ಪಿಸಿಕೊಂಡಿದ್ದ ಹಾಲಿ ಶಾಸಕ ಅನಿಲ್‌ ಬೆನಕೆ ಕಾಂಗ್ರೆಸ್‌ಗೆ ಸೇರುತ್ತಾರೆ ಎನ್ನುವ ಚರ್ಚೆ ಮಹತ್ವ ಕಳೆದುಕೊಂಡಿದೆ. ಬಿಜೆಪಿಗೆ ಪ್ರತಿಸ್ಪರ್ಧಿ ಕೊರತೆ ಎದುರಿಸುತ್ತಿರುವ ಬೆಳಗಾವಿ ದಕ್ಷಿಣದಲ್ಲಿ ಹೊಸ ಪರಿಚಯ ಎನ್ನುವಂತೆ ನೇಕಾರ ಸಮುದಾಯದ ಪ್ರಭಾವತಿ ಚಾವಡಿಗೆ ಸ್ಪರ್ಧೆಯ ಅವಕಾಶ ಸಿಕ್ಕಿದೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ ಎರಡು ಬಾರಿ ಗೆದ್ದಿದ್ದ ರಮೇಶ್‌ ಕುಡಚಿ ಈ ಬಾರಿ ದಕ್ಷಿಣದಿಂದ ಅವಕಾಶ ಕೇಳಿದ್ದರು. ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಸವದಿಗಿದೆ ಸವಾಲು
ಇನ್ನು ರಾಜ್ಯ ರಾಜಕಾರಣದಲ್ಲಿಸದ್ದು ಮಾಡುತ್ತಿರುವ ಅಥಣಿ ಕ್ಷೇತ್ರಕ್ಕೆ ಕೊನೆಗೂ ಲಕ್ಷಣ ಸವದಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಧಿಕೃತಗೊಂಡಿದ್ದಾರೆ. ಇಲ್ಲಿ ಗಜಾನನ್‌ ಮಂಗಸೂಳಿ, ಧರೆಪ್ಪ ಠಕ್ಕಣ್ಣವರ, ಸದಾಶಿವ ಬುಟಾಳೆ ಮೊದಲಾದವರು ಟಿಕೆಟ್‌ ನಿರೀಕ್ಷೆಯಲ್ಲಿದ್ದರು ಹಾಗೂ ತಮಗೇ ಟಿಕೆಟ್‌ ಎನ್ನುವ ಆತ್ಮವಿಶ್ವಾಸದಲ್ಲಿದ್ದರು. ಆದರೆ, ಸವದಿಯವರ ಆಕಸ್ಮಿಕ ಪ್ರವೇಶದಿಂದ ಅಲ್ಲೀಗ ಎಲ್ಲವೂ ತಲೆಕೆಳಗಾಗಿದೆ. ಸವದಿ ಹೊರಗಿನವರೆಂಬ ವಿಚಾರ ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವೆ ಸಂಘರ್ಷಕ್ಕೂ ಎಡೆಮಾಡಬಹುದು. ಇಂಥದ್ದೇನೂ ಬೆಳವಣಿಗೆಗಳು ಆಗದಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಹೊಣೆಗಾರಿಕೆ ಸವದಿಯವರ ಮೇಲಿದೆ. ಏಪ್ರಿಲ್ 15 ರಂದು ಅಥಣಿಗೆ ಆಗಮಿಸಿದಾಕ್ಷಣ ಅವರು ಈ ಮೂವರ ಸಹಿತ ಆಕಾಂಕ್ಷಿಗಳನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರಾದರೂ ಟಿಕೆಟ್‌ ವಂಚಿತರ ಮುಂದಿನ ನಡೆ ಇನ್ನೆರಡು ದಿನಗಳಲ್ಲಿ ಸ್ಪಷ್ಟವಾಗುವ ಸಾಧ್ಯತೆ ಇದೆ.

error: Content is protected !!