ಹೊಸದಿಲ್ಲಿ: ರಾಹುಲ್ ಗಾಂಧಿ ಅವರ ಅನರ್ಹತೆ ಪ್ರತಿಪಕ್ಷಗಳಲ್ಲಿ ಅಪರೂಪದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತೇನೆ ಎಂದಿದ್ದ ಟಿಎಂಸಿ ನಾಯಕರು ಕೂಡ ಕಾಂಗ್ರೆಸ್‌ನ ಸಭೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ನಡೆದ ದೊಡ್ಡ ಕಾರ್ಯತಂತ್ರದ ಸಭೆಯಲ್ಲಿ ಟಿಎಂಸಿಯ ಪ್ರಸೂನ್ ಬ್ಯಾನರ್ಜಿ ಹಾಗೂ ಜವಾಹರ್ ಸಿರ್ಕಾರ್ ಭಾಗವಹಿಸಿದ್ದು ವಿಪಕ್ಷಗಳ ಅಪರೂಪದ ಒಗ್ಗಟ್ಟಿಗೆ ಸಾಕ್ಷಿಯಾಯಿತು.
ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸುವ ಬಗ್ಗೆ ಪ್ರತಿಪಕ್ಷಗಳ ಕಾರ್ಯತಂತ್ರವನ್ನು ಖರ್ಗೆ ನೇತೃತ್ವದ ವಿಪಕ್ಷಗಳ ಸಭೆಯಲ್ಲಿ ಚರ್ಚಿಸಲಾಯಿತು. ಇತರ ವಿಷಯಗಳಲ್ಲಿ ಅಂತರ ಕಾಪಾಡಿಕೊಂಡರೂ ಇಂತಹ ವಿಷಯಗಳಲ್ಲಿ ಪ್ರತಿಪಪಕ್ಷಗಳು ಒಂದಾಗಬೇಕು ಎಂದು ಟಿಎಂಸಿ ನಾಯಕರು ಹೇಳಿದ್ದಾರೆ. ಟಿಎಂಸಿ ನಾಯಕರ ನಡೆಯನ್ನು ಸ್ವಾಗತಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮುಂದೆ ಬರುವವರನ್ನು ಕಾಂಗ್ರೆಸ್ ಪಕ್ಷ ಯಾವಾಗಲೂ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
ಈ ಪ್ರತಿಭಟನೆಯನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ ಮಲ್ಲಿಕಾರ್ಜುನ ಖರ್ಗೆ, ನಾನು ನಿನ್ನೆಯೇ ಎಲ್ಲರಿಗೂ ಧನ್ಯವಾದ ಹೇಳಿದ್ದೇನೆ. ಇಂದು ಕೂಡ ನಿಮಗೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಮತ್ತು ಜನರನ್ನು ರಕ್ಷಿಸಲು ಯಾರಾದರೂ ಮುಂದೆ ಬಂದರೆ ನಾವು ಸ್ವಾಗತಿಸುತ್ತೇವೆ. ನಮ್ಮನ್ನು ಬೆಂಬಲಿಸುವ ಜನರಿಗೆ ನಾವು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
‘ಮೋದಿ’ ಉಪನಾಮ ಮಾನನಷ್ಟ ಪ್ರಕರಣದಲ್ಲಿ ದೋಷಿ, ಲೋಕಸಭೆಯಿಂದ ರಾಹುಲ್ ಗಾಂಧಿ ಅನರ್ಹ
ರಾಹುಲ್ ಗಾಂಧಿ ಅನರ್ಹತೆಯನ್ನು ಖಂಡಿಸಿ ಕಾಂಗ್ರೆಸ್ ಸಂಸದರು ಸಾಂಕೇತಿಕವಾಗಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು. ಈ ವೇಳೆ ತೆಲಂಗಾಣದಲ್ಲಿ ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯ ಸದಸ್ಯರು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಾಯಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಅಪರೂಪದ ಒಗ್ಗಟ್ಟನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರದರ್ಶಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಎಂಕೆ, ಎಸ್‌ಪಿ, ಜೆಡಿಯು, ಬಿಆರ್‌ಎಸ್, ಸಿಪಿಎಂ, ಆರ್‌ಜೆಡಿ, ಎನ್‌ಸಿಪಿ, ಸಿಪಿಐ, ಐಯುಎಂಎಲ್, ಎಂಡಿಎಂಕೆ, ಕೆಸಿ, ಟಿಎಂಸಿ, ಆರ್‌ಎಸ್‌ಪಿ, ಎಎಪಿ, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಶಿವಸೇನೆಯ ನಾಯಕರು ಸೇರಿ 17 ಪಕ್ಷದವರು ಭಾಗವಹಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಜೊತೆ ಆಡಳಿತಾರೂಢ ಟಿಎಂಸಿ ಸಂಬಂಧ ಅಷ್ಟೇನೂ ಸರಿಯಿಲ್ಲ. ರಾಹುಲ್ ಗಾಂಧಿ ಅವರ ಅನರ್ಹತೆ ವಿಚಾರದಲ್ಲಿ ಟಿಎಂಸಿ ಆರಂಭದಲ್ಲಿ ಮೌನ ವಹಿಸಿತ್ತು. ವಿಪಕ್ಷಗಳ ನಾಯಕರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡಿರುವ ವಿರುದ್ಧ ಹೋರಾಡಲು ಕರೆ ನೀಡಿದಾಗಲೂ ಟಿಎಂಸಿ ಕಾಂಗ್ರೆಸ್ ನೇತೃತ್ವದ ಅನೇಕ ಸಭೆಗಳನ್ನು ತಪ್ಪಿಸಿಕೊಂಡಿತ್ತು. ಆದರೆ, ಈಗ ಟಿಎಂಸಿ ಅಚ್ಚರಿಯ ರೀತಿಯಲ್ಲಿ ಬೆಂಬಲ ಸೂಚಿಸಿದೆ.
ಬಿಜೆಪಿಯನ್ನು ತೀವ್ರವಾಗಿ ಟೀಕಿಸಿರುವ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ಅವರ ಪರ ನಿಂತಿದ್ದರು. ಪ್ರಧಾನಿ ಮೋದಿಯವರ ನವ ಭಾರತದಲ್ಲಿ ವಿರೋಧ ಪಕ್ಷದ ನಾಯಕರು ಬಿಜೆಪಿಯ ಪ್ರಧಾನ ಗುರಿಯಾಗಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಿಜೆಪಿ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ವಿರೋಧ ಪಕ್ಷದ ನಾಯಕರನ್ನು ಅವರ ಭಾಷಣಕ್ಕಾಗಿ ಅನರ್ಹಗೊಳಿಸಲಾಗಿದೆ. ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಹೊಸ ಕುಸಿತಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಮಮತಾ ಬ್ಯಾನರ್ಜಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದರು