ನವದೆಹಲಿ: ಆರ್ಥಿಕವಾಗಿ ಕುಗ್ಗಿರುವ ಕಾಂಗ್ರೆಸ್, ತನ್ನ ಬೊಕ್ಕಸವನ್ನು ತುಂಬಿಸುವ ಸಲುವಾಗಿ ಪಕ್ಷದ ಸರ್ವಸದಸ್ಯರು ಮತ್ತು ಹಿರಿಯ ಸದಸ್ಯರ ಶುಲ್ಕವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ಶುಕ್ರವಾರದಿಂದ ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನ ಆರಂಭವಾಗಲಿದ್ದು, ಅದರಲ್ಲಿ ಪಕ್ಷದ ಬೊಕ್ಕಸಕ್ಕೆ ಸಹಾಯ ಮಾಡಲು ಮತ್ತು ಪಕ್ಷವನ್ನು ಪುನಶ್ಚೇತನಗೊಳಿಸುವ ಕೆಲ ನಿರ್ಣಯಗಳನ್ನು ಮಂಡಿಸಿ ಅದಕ್ಕೆ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆ ಇದೆ.
ಸರ್ವಸದಸ್ಯರ ಸಭೆಯಲ್ಲಿ 15 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು, ಇವರಿಗೆ ಹಾಲಿ ಇರುವ 100 ರೂ. ಸದಸ್ಯತ್ವ ಶುಲ್ಕವನ್ನು ವರ್ಷಕ್ಕೆ 1,000 ರೂ.ಗೆ ಹೆಚ್ಚಿಸಲಾಗುವುದು. ಇದರಲ್ಲಿ 400 ರೂ ಅಭಿವೃದ್ಧಿ ಶುಲ್ಕ ಇರಲಿದೆ. 300 ರೂ.ಗಳನ್ನು ಪಕ್ಷದ ನಿಯತಕಾಲಿಕ ‘ಸಂದೇಶ್’ಗೆ ನೀಡಲಾಗುವುದು ಎಂದು ಅವು ಹೇಳಿವೆ. ಇದೇ ವೇಳೆ, ಹಿರಿಯ ಎಐಸಿಸಿ ಸದಸ್ಯರಿಗೆ 3 ಸಾವಿರ ರೂ. ಶುಲ್ಕವನ್ನು ಹಾಕಲಾಗುವುದು ಮತ್ತು 5 ವರ್ಷಗಳವರೆಗೆ ವಾರ್ಷಿಕ 1000 ರೂ. ಅಭಿವೃದ್ಧಿ ಶುಲ್ಕ ಹಾಕಲಾಗುವುದು. ‘ಕಷ್ಟದ ಸಮಯದಲ್ಲಿ, ಭಾರಿ ಹಣದ ಕೊರತೆ ಇರುವಾಗ ಪಕ್ಷಕ್ಕೆ ಕಾರ್ಯಕರ್ತರು ಹೆಚ್ಚಿನ ಶುಲ್ಕ ನೀಡಿ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಮೂಲಗಳು ಆಶಿಸಿವೆ
ನರಸಿಂಹರಾವ್‌ಗೆ ನೀಡದ ಸತ್ಕಾರ ಗಾಂಧಿ ಕುಟುಂಬಕ್ಕೆ..!
ಸಿಡಬ್ಲ್ಯುಸಿ ಚುನಾವಣೆಗೆ ಸಿದ್ಧ:
ಕಾಂಗ್ರೆಸ್‌ನ ನಿರ್ಣಾಯಕ ಸಮಿತಿ ಆದ ಕಾರ್ಯಕಾರಿಣಿ ಸಮಿತಿಗೆ (ಸಿಡಬ್ಲುಸಿಗೆ) ಚುನಾವಣೆ ನಡೆಸಲು ಪಕ್ಷ ಸಿದ್ಧವಾಗಿದೆ. ಹೊಸ ನಿಯಮದ ಪ್ರಕಾರ, ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನ ಮಂತ್ರಿಗಳು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರು ತನ್ನಿಂತಾನೇ ಸಿಡಬ್ಲುಸಿ ಸದಸ್ಯರಾಗುತ್ತಾರೆ.
ಇದರ ಹೊರತಾಗಿ 23 ಇತರರು ಸಿಡಬ್ಲುಸಿಗೆ ಆಯ್ಕೆ ಆಗಬಹುದಾಗಿದೆ. ಆದರೆ ಇದಕ್ಕಾಗಿ ಅವರು ಆಂತರಿಕ ಚುನಾವಣೆ ಎದುರಿಸಬೇಕು. ಹೀಗಾಗಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಲ್ಲದ ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ವಯಂಚಾಲಿತವಾಗಿ ಸಿಡಬ್ಲುಸಿ ಸದಸ್ಯೆ ಆಗಲು ಬರುವುದಿಲ್ಲ. ಅವರು ಆಂತರಿಕ ಮತದಾನದ ಮೂಲಕ ಆಯ್ಕೆ ಆಗಬೇಕು. ಇದೇ ವೇಳೆ ಸಮಿತಿಯಲ್ಲಿ, ಉದಯಪುರ ಘೋಷಣೆ ಅನುಸಾರ ಶೇ. 50 ಹಿರಿಯರು ಹಾಗೂ ಶೇ. 50 ಯುವಕರಿಗೆ ಆದ್ಯತೆ ನೀಡಲು ಬಯಸುತ್ತಿದೆ.
ಸದಸ್ಯತ್ವ ಶುಲ್ಕವನ್ನು ಹೆಚ್ಚಿಸುವ ಮತ್ತು ಚುನಾವಣೆಗಳನ್ನು ನಡೆಸುವ ಪ್ರಮುಖ ಬದಲಾವಣೆಯು ಭಾರತ್ ಜೋಡೋ ಯಾತ್ರೆಯ ನೇರ ಫಲಿತಾಂಶ ಎಂದು ಹೇಳಲಾಗಿದೆ. ನಾಯಕರು ಕಾರ್ಯಕರ್ತರು ಮತ್ತೆ ಸಂಪರ್ಕ ಸಾಧಿಸಬೇಕು ಹಾಗೂ ಸಂಘಟನೆಯನ್ನು ಕಟ್ಟುವ ಮತ್ತು ಬಲಪಡಿಸುವ ಕಡೆಗೆ ಹೆಚ್ಚಿನ ಬದ್ಧತೆಯನ್ನು ತೋರಿಸಬೇಕೆಂದು ರಾಹುಲ್ ಗಾಂಧಿ ಬಯಸುತ್ತಾರೆ.
ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಇತರ ಹಿಂದುಳಿದ ವರ್ಗಗಳು (ಓಬಿಸಿ) ಅಲ್ಪಸಂಖ್ಯಾತರಿಗೆ 50 ಪ್ರತಿಶತ ಮೀಸಲಾತಿಯೊಂದಿಗೆ ಉದಯಪುರ ಘೋಷಣೆಗೆ ಅನುಗುಣವಾಗಿ ಸದಸ್ಯರ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಮತ್ತು 50 ವಯಸ್ಸಿನೊಳಗಿನ ಯುವ ಮುಖವನ್ನು ತೋರಿಸಲು ಕಾಂಗ್ರೆಸ್ ಉತ್ಸುಕವಾಗಿದೆ.
6 ರಾಜ್ಯ ಪ್ರತಿನಿಧಿಗಳು ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿದ್ದು, ಸಹಕಾರಿ ಸದಸ್ಯರ ಸಂಖ್ಯೆಯನ್ನು ಶೇ. 15 ರಿಂದ 25 ಕ್ಕೆ ಹೆಚ್ಚಿಸುವುದರೊಂದಿಗೆ ಎಐಸಿಸಿಯನ್ನು ವಿಸ್ತರಿಸಲಾಗುತ್ತಿದೆ ಎಂದೂ ವರದಿ ಸೂಚಿಸುತ್ತದೆ.