ಒಡಿಶಾ: ಇನ್ನೇನು ಫೆಬ್ರವರಿ ಬಂತೆಂದರೆ ಹೊಸ ಹಳೆಯ ಪ್ರೇಮಿಗಳಲ್ಲಿ ಅದೇನೋ ಸಂಚಲನ. ಕಾರಣ ಪ್ರೇಮಿಗಳ ದಿನ. ಆದರೆ ಈ ಪ್ರೇಮಿಗಳ ದಿನ ಆಚರಿಸುವುದಕ್ಕೆ ಪರ ವಿರೋಧವಿದೆ. ಅದೂ ನಮ್ಮ ಸಂಸ್ಕೃತಿ ಅಲ್ಲವೆಂದು ಬಲಪಂಥೀಯ ಸಂಘಟನೆಗಳು ಹೋರಾಟ ಶುರು ಮಾಡಿದರೆ, ಇತರ ಶಾಪಿಂಗ್ ಮಾಲ್‌ಗಳು ವ್ಯಾಪಾರ ಮಳಿಗೆಗಳ, ಆನ್‌ಲೈನ್ ಮಾರುಕಟ್ಟೆಗಳು ಪ್ರೇಮಿಗಳ ದಿನದ ನೆಪದಲ್ಲಿ ತುಸು ಲಾಭ ಮಾಡಿಕೊಳ್ಳಲು ನೋಡುತ್ತಾರೆ. ಹೊಸ ಹೊಸ ಆಫರ್‌ಗಳನ್ನು ಬಿಡುವ ಮೂಲಕ ಪ್ರೇಮಿಗಳನ್ನು ಸೆಳೆಯಲು ಯತ್ನಿಸುತ್ತಾರೆ. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೇಮಿಗಳ ದಿನ ಆಚರಿಸಲು ಎಲ್ಲೂ ಅವಕಾಶವಿಲ್ಲ.
ಆದರೆ ಇದಕ್ಕೆ ವಿರುದ್ಧ ಎಂಬಂತೆ ಒಡಿಶಾದ ಕಾಲೇಜೊಂದು ಪ್ರೇಮಿಗಳ ದಿನದಂದು ಕಾಲೇಜಿನ ವಿದ್ಯಾರ್ಥಿನಿಯರು ಕನಿಷ್ಠ ಒಬ್ಬ ಬಾಯ್‌ಫ್ರೆಂಡ್ ಜೊತೆ ಬರದಿದ್ದರೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ನೋಟೀಸ್ ಒಂದನ್ನು ಕಳುಹಿಸಿದೆ ಎಂಬ ಸುದ್ದಿಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನೊಟೀಸ್ ನೋಡಿ ಪೋಷಕರು ದಂಗಾಗಿದ್ದಾರೆ.
ಆದರೆ ಕಾಲೇಜು ಈ ರೀತಿ ನೋಟೀಸ್ ಕಳುಹಿಸಿಲ್ಲ.
ಇದು ಕಿಡಿಗೇಡಿ ವಿದ್ಯಾರ್ಥಿಗಳ ಕಿತಾಪತಿ ಎಂಬುದು ನಂತರ ತಿಳಿದು ಬಂದಿದ್ದು, ಇದೊಂದು ಕಾಲೇಜಿನ ಹೆಸರಿನಲ್ಲಿ ಕಳುಹಿಸಲಾಗಿರುವ ನಕಲಿ ನೊಟೀಸ್ ಎಂಬುದು ಗೊತ್ತಾಗಿದೆ. ಇದರಿಂದ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ. ಅಂದಹಾಗೆ ಒಡಿಶಾದ ಜಗತ್‌ಸಿಂಗ್‌ಪುರದಲ್ಲಿರುವ ಎಸ್‌ವಿಎಂ ಸ್ವಾಯತ್ತ ಕಾಲೇಜಿನ ಹೆಸರಿನಲ್ಲಿ ಈ ನಕಲಿ ನೊಟೀಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ವಿಚಿತ್ರ ಎಂದರೆ ಈ ನೊಟೀಸ್‌ನಲ್ಲಿ ಕಾಲೇಜಿನ ಪ್ರಾಂಶುಪಾಲರ ಸಹಿ ಕೂಡ ಇದೆ.
ನೊಟೀಸ್‌ನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರೆಲ್ಲಾ ಕನಿಷ್ಠ ಪ್ರೇಮಿಗಳ ದಿನದಂದು ಒಬ್ಬ ಬಾಯ್‌ಫ್ರೆಂಡ್ ಜೊತೆ ಕಾಲೇಜಿಗೆ ಬರಬೇಕು. ಬಾಯ್‌ಫ್ರೆಂಡ್ ಜೊತೆ ಬರುವ ವಿದ್ಯಾರ್ಥಿನಿಯರನ್ನು ಮಾತ್ರ ಕಾಲೇಜಿನ ಒಳಗೆ ಬಿಡಲಾಗುವುದು ಎಂದು ಈ ನಕಲಿ ನೊಟೀಸ್‌ನಲ್ಲಿ ಬರೆಯಲಾಗಿತ್ತು. ಕಾಲೇಜು ಪ್ರಿನ್ಸಿಪಾಲ್ ಸಹಿ ಜೊತೆ ಬಂದ ಈ ನಕಲಿ ನೊಟೀಸ್ ನೋಡಿ ಕಾಲೇಜಿನ ವಿದ್ಯಾರ್ಥಿನಿಯರು ಮಾತ್ರವಲ್ಲದೇ ಪೋಷಕರು ಕೂಡ ಒಂದು ಕ್ಷಣ ದಂಗಾಗಿದ್ದರು. ಆದರೆ ಈ ನೋಟೀಸ್‌ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಸವತ್ತಾಗಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.
ಆದರೆ ಈ ವಿಚಾರದ ಬಗ್ಗೆ ವಿದ್ಯಾರ್ಥಿನಿಯೊಬ್ಬರನ್ನು ಕೇಳಿದಾಗ, ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಕೃತ್ಯವೆಸಗಿದ್ದಾರೆ. ನಮ್ಮ ಕಾಲೇಜು ಹಾಗೂ ಪ್ರಾಂಶುಪಾಲರ ಹೆಸರು ಹಾಳು ಮಾಡಲು ಈ ಕೃತ್ಯವೆಸಗಿದ್ದು, ನಮ್ಮ ಪ್ರಾಂಶುಪಾಲರು ತುಂಬಾ ಒಳ್ಳೆಯ ವ್ಯಕ್ತಿ ಅವರು ಹೀಗೆ ಮಾಡಲು ಸಾಧ್ಯವಿಲ್ಲ ಎಂದು ರಶ್ಮಿತಾ ಬೆಹೆರಾ ಎಂಬ ವಿದ್ಯಾರ್ಥಿನಿ ಹೇಳಿದ್ದಾರೆ. ಈ ನೋಟಿಸ್ ಕಾಲೇಜಿನಿಂದ ಪ್ರಕಟಿಸಲ್ಪಟಿದ್ದಲ್ಲ. ಇದರಲ್ಲಿ ಇರುವ ಲೆಟರ್ ಹೆಡ್ ಕೂಡ ಫೇಕ್, ಅಲ್ಲದೇ ಇದರಲ್ಲಿ ಕಾಲೇಜಿನ ಫೋನ್ ನಂಬರ್ ಇಲ್ಲ ಹಾಗೂ ಹೆಸರು ಕೂಡ ಸರಿಯಾದ ಆರ್ಡರ್‌ನಲ್ಲಿ ಇಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಯಾರೋ ಕಿಡಿಗೇಡಿ ಯುವಕರ ಕಿತಾಪತಿಯಿಂದಾಗಿ ವಿದ್ಯಾರ್ಥಿನಿಯರು ಕೆಲ ಕಾಲ ದಂಗಾಗಿದ್ದಂತು ನಿಜ.