ನೆಗಡಿ:
ನೆಗಡಿ ಒಂದು ಸಾಮಾನ್ಯ ಅಂಟುರೋಗ .ರೈನೋ ವೈರಸ್ ನಿಂದ ಈ ರೋಗ ಜನ್ಮ ತಾಳುತ್ತದೆ. ಈ ರೋಗದಿಂದ ಬಳಲುವ ವ್ಯಕ್ತಿ ಕೆಮ್ಮುವಾಗ ,ಸೀನುವಾಗ, ಮತ್ತು ಮಾತನಾಡುವಾಗ ಹೊರಹಾಕುವ ತುಂತುರಿನಲ್ಲಿ ವೈರಸ್ ಅಡಕವಾಗಿರುತ್ತವೆ . ಅವು ಗಾಳಿಯಲ್ಲಿ ಮಿಶ್ರಣಗೊಂಡು ತೇಲಿ ಹೋಗುವಾಗ, ಅದರ ಸಂಪರ್ಕಕ್ಕೆ ಬರುವ ವ್ಯಕ್ತಿ ಸುಲಭವಾಗಿ ನೆಗಡಿಗೆ ಗುರಿಯಾಗುತ್ತಾನೆ. ಸೋಂಕಿನ ಪ್ರಭಾವಕ್ಕೆ ಒಳಗಾದ ಒಂದೆರಡು ದಿನಗಳಲ್ಲಿ ರೋಗ ಲಕ್ಷಣಗಳು ಗೋಚರಿಸುತ್ತವೆ. ಮೂಗು ಮತ್ತು ಗಂಟಲಿನ ಲೋಳ್ಪರೆ ಕೆಂಪಡರಿ, ಉಬ್ಬಿ ದ್ರವವನ್ನು ಒಸರುತ್ತದೆ. ವ್ಯಕ್ತಿಯ ಮೂಗಿನಿಂದ ನೀರು ಸೋರ ತೊಡಗಿ ತಲೆನೋವು, ಸುಸ್ತು, ಗಂಟಲು ಕೆರೆತ, ಮತ್ತು ಬಾಯ್ಕೆಮ್ಮು ತೋರಿಬರುತ್ತದೆ.
ಜ್ವರ ರೋಗ ಲಕ್ಷಣವಲ್ಲ. ಪ್ರಾರಂಭದಲ್ಲಿ ಮೂಗಿನಿಂದ ವಿಪುಲವಾಗಿ ನೀರು ಸೋರುತ್ತದೆ. ಜೊತೆಯಲ್ಲಿ ಸೀನು ಪದೇ ಪದೇ ಬರುವುದಲ್ಲದೆ ಮೂಗು ಕಟ್ಟಿಕೊಳ್ಳುತ್ತದೆ. ಅನಂತರ ಸ್ರವಿಕೆ ಗಟ್ಟಿಯಾಗಿ ಹಸಿರು-ಹಳದಿ ಬಣ್ಣ ಹೊಂದುವುದು. ಅನೇಕ ಬಾರಿ ಮೂಗು ಕಟ್ಟಿಕೊಂಡು, ಮೂಗಿನ ಮೂಲಕ ಉಸಿರಾಟ ಕಷ್ಟಕರವಾಗುತ್ತದೆ. ವಾಸನೆ ಮತ್ತು ರುಚಿ ಗುರುತಿಸಲಾಗುವುದಿಲ್ಲ. ಈ ಲಕ್ಷಣಗಳು ಒಂದು ವಾರದ ಅವಧಿಯಲ್ಲಿ ದೂರವಾಗುತ್ತದೆ. ನೆಗಡಿಯ ತೊಂದರೆಯಾದಾಗ ಈ ಕೆಳಗಿನ ಉಪಚಾರಗಳನ್ನು ಮಾಡಿ.