ಕೂಗು ನಿಮ್ಮದು ಧ್ವನಿ ನಮ್ಮದು

ತಂದೆಯೂ ಈ ಹಿಂದೆ ಮುಖ್ಯಮಂತ್ರಿ; ಈಗ ಮಗನೂ ರಾಜ್ಯದ ಮುಖ್ಯಮಂತ್ರಿ- ಇಲ್ಲಿದೆ ನ್ಯೂ ಸಿಎಂ ಬೊಮ್ಮಾಯಿ ಅವರ ಸಂಕ್ಷಿಪ್ತ ಪರಿಚಯ

ಬೆಂಗಳೂರು: ಹೌದು ಬಿ ಎಸ್ ಯಡಿಯೂರಪ್ಪ ಅವರ ರಾಜೀನಾಮೆಯ ನಂತರ ತೆರವಾದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿದೆ. ಈ ಮೂಲಕ ಯಡಿಯೂರಪ್ಪ ಅವರ ಪಾಳಯದ ನಾಯಕನನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಬಸವರಾಜ ಬೊಮ್ಮಾಯಿ ಅವರ ಕಿರು ಪರಿಚಯ ಇಲ್ಲಿದೆ…

ಹುಬ್ಬಳ್ಳಿಯಲ್ಲಿ 28-01-1960 ರಂದು ಜನಿಸಿದ ಬಸವರಾಜ್ ಬೊಮ್ಮಾಯಿ ಹುಟ್ಟಿನಿಂದಲೇ ರಾಜಕೀಯ ವಾತಾವರಣದಲ್ಲಿ ಬೆಳೆದವರು. ತಂದೆ ಎಸ್.ಆರ್.ಬೊಮ್ಮಾಯಿ ಜನತಾದಳದ ಕಟ್ಟಾ ಅನುಯಾಯಿ ಅಲ್ಲದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವರಾಗಿ, ರಾಷ್ಟ್ರೀಯ ಜನತಾದಳದ ಅಧ್ಯಕ್ಷರಾಗಿದ್ದವರು.ತಂದೆ ಜನತಾದಳದಿಂದ ಮುಖ್ಯಮಂತ್ರಿಯಾಗಿದ್ದ ಕಾರಣ, ಇವರು ಸಹ ಜನತಾದಳದಿಂದಲೇ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. ಅಲ್ಲದೇ 1993ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಯುವ ಜನತಾದಳದ ಬೃಹತ್ ಸಮಾವೇಶದ ರೂವಾರಿ, ನಂತರ 1995ರಲ್ಲಿ ರಾಜ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ, ನಂತರ 1996 ರಿಂದ 1997 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಅವರಿಗೆ

ರಾಜಕೀಯ ಕಾರ್ಯದರ್ಶಿಯಾಗಿ ಪಟೇಲರ ಗರಡಿಯಲ್ಲಿ ಪಳಗಿದವರು.232 ಕಿಮೀ ಪಾದಯಾತ್ರೆ ಮಾಡಿದ್ದ ಛಲಗಾರ2007ನೇ ಇಸವಿಯ ಜುಲೈನಲ್ಲಿ ಧಾರವಾಡದಿಂದ ನರಗುಂದದವರೆಗೆ 232 ಕಿಮೀ ದೂರವನ್ನ 21 ದಿನಗಳ ಕಾಲ ರೈತರೊಂದಿಗೆ ಹೆಜ್ಜೆ ಹಾಕಿ ರೈತ ಹೋರಾಟಕ್ಕೆ ಬಲ ತುಂಬಿದವರು ಬೊಮ್ಮಾಯಿ. ಆನಂತರ 2008ರಲ್ಲಿ ಜನತಾದಳ ತೊರೆದು ಬಿಜೆಪಿ ಪಾಳಯಕ್ಕೆ ಜಿಗಿದಿದ್ದರು.

ಮೆಕ್ಯಾನಿಕಲ್​ ಎಂಜಿನಿಯರಿಂಗ್​ ಪಧವೀದರರಾಗಿರುವ ಬೊಮ್ಮಾಯಿ ಈ ಕ್ಷೇತ್ರದಲ್ಲಿ ಸಾಕಷ್ಟು ನೈಪುಣ್ಯತೆ ಪಡೆದವರು. ಅಲ್ಲದೇ ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು

ವರ್ಷಗಳ ತಾಂತ್ರಿಕ ತರಬೇತಿ ಪಡೆದಿದ್ದಾರೆ. ತಂದೆ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಆ ಕಡೆಗೆ ಹೋಗದೆ ಸ್ವಂತ ಉದ್ಯಮ ನಡೆಸುತ್ತಿದ್ದರು. ಆದರೆ ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ ಇದ್ದಂತಹ ರಾಜಕೀಯದ ಆಸಕ್ತಿ ಗರಿಗೆದರಿತು. ನಂತರ ತಿರುಗಿ ನೋಡಿದ್ದೆ ಇಲ್ಲ.31-12-1997 ಹಾಗೂ 04-12-2003 ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ-ಹಾವೇರಿ-ಗದಗ) ನಡೆದ ಚುನಾವಣೆಯಲ್ಲಿ

ಸತತ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆ.2008ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭೆ ಮತಕ್ಷೇತ್ರದಿಂದ ಆಯ್ಕೆ. ನಂತರ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಸೇರಿದಂತೆ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸತತ ಐದು ವರ್ಷಗಳ ಕಾಲ ಜಲ ಸಂಪನ್ಮೂಲ ಸಚಿವರಾಗಿ ಕೆಲಸ. ಮತ್ತೆ 2013ರಲ್ಲಿ ನಡೆದ ಚುನಾವಣೆಯಲ್ಲೂ ಶಾಸಕನಾಗಿ ಆಯ್ಕೆ, 2018ರಲ್ಲಿ ಮತ್ತೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಬಾರಿಸಿದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವ ಸ್ಥಾನ ಪಡೆಯವಲ್ಲಿ ಯಶಸ್ವಿ. ನೀರಾವರಿ ಕುರಿತು ಅಧಿಕ ಜ್ಞಾನವನ್ನು ಹೊಂದಿರುವ ಬೊಮ್ಮಾಯಿ ಅವರು ಸಾಕಷ್ಟು ಪ್ರಯೋಗಗಳನ್ನು ತಮ್ಮ ಕ್ಷೇತ್ರದಲ್ಲಿ ಮಾಡಿ ಹೆಸರುಗಳಿಸಿದವರು.

error: Content is protected !!