ಬೆಂಗಳೂರು: ದಾಸ್ತಾನು ಇದ್ದರೂ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಭಾರತೀಯ ಆಹಾರ ನಿಗಮ (FCI) ಪರೋಕ್ಷವಾಗಿ ತಿರುಗೇಟು ನೀಡಿದೆ. ಸದ್ಯ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ವಾರ್ ಮಾಡಿದೆ.ಪುಕ್ಕಟೆ ವಿದ್ಯುತ್ ಕೊಡುತ್ತೇವೆಂದು ವಿದ್ಯುತ್ ದರ ಏರಿಸಿದ್ದೀರಿ. ಗೃಹಜ್ಯೋತಿ ಅರ್ಜಿ ದಿನಾಂಕವನ್ನು ಮುಂದಕ್ಕೆ ತಳ್ಳಿದ್ದೀರಿ. ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವ ನಿಮ್ಮ ಚಿಂತಾಜನಕ ಸ್ಥಿತಿಗೆ ನಮ್ಮ ವಿಷಾದ ಎಂದು ಬಿಜೆಪಿ ಲೇವಡಿ ಮಾಡಿದೆ.
ಅಕ್ಕಿ ಕೊಡುವ ಮೊದಲೇ ಕೇಂದ್ರದ ಕಡೆ ‘ಕೈ’ ತೋರಿಸಿ ನಿರೀಕ್ಷಣಾ ಜಾಮೀನು ಪಡೆಯುವ ನಿಮ್ಮ ‘ಗ್ಯಾರಂಟಿ’ ಹುನ್ನಾರ ನಾಡಿನ ಸಮಸ್ತ ಜನರಿಗೆ ಅರ್ಥವಾಗಿದೆ ಸ್ವಾಮಿ ಎಂದು ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಕೇಂದ್ರ ಸರ್ಕಾರದ ಮೇಲೆ ಸಿದ್ದರಾಮಯ್ಯ ಆರೋಪ
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು 2,08,425 ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ಇದನ್ನು ಕೊಡಲು ಕೇಂದ್ರವು ಒಪ್ಪಿಕೊಂಡಿತ್ತು. ಕೇಂದ್ರದ ಒಪ್ಪಿಗೆ ಆಧಾರದಲ್ಲಿ ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಇದಾದ ಬಳಿಕ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.
13ರಂದು ಒಂದು ಪತ್ರ ಬರೆದು ರಾಜ್ಯ ಸರ್ಕಾರಗಳಿಗೆ ಸೇಲಂ ಗೋಧಿ ಹಾಗೂ ಅಕ್ಕಿ ಕೊಡಲು ಆಗಲ್ಲವೆಂದು ತಿಳಿಸಿದೆ. ಕೇಂದ್ರ ಸರ್ಕಾರ ರಾಜಕೀಯ ತೀರ್ಮಾನ ಮಾಡಿ ಕರ್ನಾಟಕ ಸರ್ಕಾರಕ್ಕೆ ಅಕ್ಕಿ ಕೊಡಬಾರದು ಅಂತ ಈ ರೀತಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.