ಬೆಂಗಳೂರು: ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯದ 30ನೇ ನೂತನ ಮುಖ್ಯಮಂತ್ರಿಯಾಗಿ ಬೆಂಗಳೂರಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಸವರಾಜ ಬೊಮ್ಮಾಯಿಯವರಿಗೆ ಪ್ರಮಾಣ ವಚನ ಭೋದಿಸಿದ್ದು ದೇವರ ಹೆಸರಿನಲ್ಲಿ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೇವಲ ಮೂರೇ ನಿಮಿಷದಲ್ಲಿ ಕಾರ್ಯಕ್ರಮ ಮುಗಿದಿದೆ. ಈ ಸಮಾರಂಭಕ್ಕೆ ಬಸವರಾಜ ಬೊಮ್ಮಾಯಿ ಕುಟುಂಬಸ್ಥರಾದ ಪತ್ನಿ ಚನ್ನಮ್ಮ, ಪುತ್ರ ಭರತ್, ಪುತ್ರಿ ಆದಿತಿ ಸಾಕ್ಷಿಯಾಗಿದ್ದಾರೆ.
ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಚಿವ ಅರ್. ವಿ. ದೇಶಪಾಂಡೆ, ಸೇರಿದಂತೆ ಹಿಂದಿನ ಸಚಿವ ಸಂಪುಟದ ಬಹುತೇಕ ಸಚಿವರು, ಅನೇಕ ಬಿಜೆಪಿ ಶಾಸಕರು, ಬಿಜೆಪಿ ಮುಖಂಡರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು ರಾಜ ಭವನದ ಹೊರಗೆ ಬೆಂಬಲಿಗರು, ಕಾರ್ಯಕರ್ತರು ಘೋಷಣೆ ಕೂಗಿ ಶುಭ ಹಾರೈಸಿದ್ದಾರೆ.