ಬೆಂಗಳೂರು : ಕರ್ನಾಟಕದ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಹತ್ವದ ಹುದ್ದೆ ಲಭಿಸಿದೆ. ಸುನೀಲ್ ಕನುಗೋಳು ಅವರನ್ನು ಸಿದ್ದರಾಮಯ್ಯ ಅವರ ಮುಖ್ಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಸಂಪುಟ ದರ್ಜೆಯ ಸಚಿವರ ಸ್ಥಾನಮಾನವನ್ನು ಪಡೆಯಲಿದ್ದಾರೆ.
ಈ ಬಗ್ಗೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಳು ನೇಮಕವಾಗುತ್ತಿದ್ದು, ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಹಾಗೂ ಎಲ್ಲ ಸೌಕರ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೆಲ್ಲಲು ಸುನೀಲ್ ಕನುಗೋಳು ಅವರ ಚುನಾವಣಾ ತಂತ್ರಗಾರಿಕೆ ಬಹಳಷ್ಟು ಕೆಲಸ ಮಾಡಿದೆ. ಈಗಾಗಿ ಸರ್ಕಾರದ ಮಟ್ಟದಲ್ಲೂ ಅವರ ತಂತ್ರಗಾರಿಕೆಯನ್ನು ಬಳಸಿಕೊಳ್ಳಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಸುನೀಲ್ ಕನುಗೋಳು ಅವರನ್ನು ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.
ಯಾರು ಈ ಸುನೀಲ್ ಕನುಗೋಳು!
ಕರ್ನಾಟಕದ ಬಳ್ಳಾರಿ ಮೂಲದವರಾದ ಸುನೀಲ್ ಕನುಗೋಳು ಬೆಳೆದಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಬಳಿಕ ಚುನಾವಣಾ ತಂತ್ರಗಾರರಾಗಿ ಕೆಲಸ ಆರಂಭಿಸಿದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪರ ಚುನಾವಣಾ ತಂತ್ರಗಾರರಾಗಿ ಕೆಲಸ ಮಾಡಿದ್ದರು. ಅದಲ್ಲದೇ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ತಂಡದಲ್ಲಿ ಪ್ರಮುಖ ಪಾತ್ರವನ್ನು ಸುನೀಲ್ ಕನುಗೋಳು ನಿರ್ವಹಿಸಿದ್ದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ಗೆ ಹತ್ತಿರವಾದ ಸುನೀಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ರೂಪುರೇಷೆಯನ್ನು ಸುನೀಲ್ ಕನುಗೋಳು ಸಿದ್ಧಪಡಿಸಿದ್ದರು. ಕರ್ನಾಟಕದಲ್ಲಿ ಈ ಯಾತ್ರೆ ಕಾಂಗ್ರೆಸ್ಗೆ ಭಾರೀ ಫಸಲನ್ನೇ ತಂದುಕೊಟ್ಟಿರುವುದು ಚುನಾವಣಾ ಫಲಿತಾಂಶದಲ್ಲಿ ದಾಖಲಾಗಿದೆ. ಅದಲ್ಲದೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಸುನೀಲ್ ಕನುಗೋಳು ಅವರ ತಂಡ ನಿರಂತರವಾಗಿ ಕೆಲಸ ಮಾಡಿದ್ದು, ಕಾಂಗ್ರೆಸ್ನ ಕೆಲವು ನಾಯಕರನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ ಅದರ ವರದಿ ನೀಡಿತ್ತು. ಅದರನ್ವಯವೇ ಟಿಕೆಟ್ ಹಂಚಿಕೆ ಕೂಡ ಆಗಿತ್ತು.
ಕಳೆದ ವರ್ಷ ಕಾಂಗ್ರೆಸ್ ನಾಯಕರು ರಾಜಸ್ಥಾನದಲ್ಲಿ ನಡೆಸಿದ್ದ ಚಿಂತನಾ ಶಿಬಿರದ ಬಳಿಕ ಸುನೀಲ್ ಕನುಗೋಳು ಅವರನ್ನು ಸೋನಿಯಾ ಗಾಂಧಿ ಅವರು ಮುಂಬರುವ ರಾಜ್ಯ ವಿಧಾನಸಬೆ ಚುನಾವಣೆಗಳು ಹಾಗೂ ಲೋಕಸಭೆ ಚುನಾವಣೆಗೆ ಚುನಾವಣಾ ತಂತ್ರಗಾರರನ್ನಾಗಿ ನೇಮಿಸಿದ್ದರು. ಕರ್ನಾಟಕದಲ್ಲಿ ಪೇ ಸಿಎಂ ಸೇರಿ ಅನೇಕ ಅಭಿಯಾನಗಳನ್ನು ನಡೆಸಿ ಕಾಂಗ್ರೆಸ್ಗೆ ಲಾಭ ಮಾಡಿಕೊಟ್ಟ ಕೀರ್ತಿ ಈ ಸುನೀಲ್ ಕನುಗೋಳು ಅವರದ್ದು.
ಇನ್ನು, 2014ರ ಲೋಕಸಭಾ ಚುನಾವಣೆ, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಸುನೀಲ್ ಕನುಗೋಳು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪರ ಕೆಲಸ ಮಾಡಿದ್ದರು. ಬಳಿಕ 2021ರಲ್ಲಿ ಡಿಎಂಕೆ ಪರ ತಂತ್ರಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿಯ ಬಿಲಿಯನ್ ಮೈಂಡ್ಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ.