ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ಆಗಿ ನಾನು ಹುಬ್ಬಳ್ಳಿಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ!ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ನಾನು ಹುಬ್ಬಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದೇನೆ. ನನ್ನ ದೊಡ್ಡ ಬಳಗ ಇಲ್ಲಿದ್ದು ನನ್ನ ಶಿಕ್ಷಣ ಇಲ್ಲೇ ಮುಗಿದಿದೆ. ನನ್ನ ಪ್ರೀತಿಯ ಊರು ಹುಬ್ಬಳ್ಳಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಆಗಿ ನಾನು ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ನನ್ನನ್ನು ಗುರುತಿಸಿ ಸಿಎಂ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹರಿಸಿದ್ದಾರೆ. ಇವರೆಲ್ಲದ ಆಶೀರ್ವಾದದಿಂದ ಇಲ್ಲಿ ಬಂದಿದ್ದೇನೆ ಎಂದರು.

ಬೆಂಗಳೂರು ಬಿಟ್ಟ ನಂತರ ಹುಬ್ಬಳ್ಳಿ- ಧಾರವಾಡ ದೊಡ್ಡ ನಗರ. ಇಲ್ಲಿ ಏನು ಅಭಿವೃದ್ಧಿ ಮಾಡಬೇಕು ಅದನ್ನು ಮಾಡುತ್ತೇನೆ. ಕೇಂದ್ರ ಸಚಿವ ಜೋಶಿ, ಜಗದೀಶ್ ಶೆಟ್ಟರ್, ಶಾಸಕರು ಇದ್ದಾರೆ. ಪಕ್ಷ ಇಲ್ಲಿ ಬಲಿಷ್ಟವಾಗಿದೆ. ಎಲ್ಲರ ಸಲಹೆ ಪಡೆದು ಕೆಲಸ ಮಾಡುತ್ತೇನೆ. ನಾನು ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರನ್ನು ಭೇಟಿ ಮಾಡುತ್ತೇನೆ. ಇದು ನನ್ನ ಮೊದಲ ಭೇಟಿ, ಶುಭ ಕೋರಿ ಆಶೀರ್ವಾದ ಪಡೆದುಕೊಳ್ಳುತ್ತೇನೆ. ದೆಹಲಿಯಲ್ಲಿ ನಾಯಕರ ಭೇಟಿ ಮಾಡಿ ಸಂಪುಟ ಬಗ್ಗೆ ಚರ್ಚೆ ಮಾಡುತ್ತೇನೆ. ಆ ಸಂದರ್ಭದಲ್ಲಿ ಸಚಿವ ಸಂಪುಟದ ಸದಸ್ಯರ ಆಯ್ಕೆಯಾಗಲಿದೆ ಎಂದು ನುಡಿದ್ದಾರೆ.

ಶೆಟ್ಟರ್ ಸಚಿವ ಸಂಪುಟದಲ್ಲಿ ಸೇರಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿಯವರು, ಅವರು ಹಿರಿಯರು, ಅವರು ತಮ್ಮ ವಿಚಾರ ಬಹಿರಂಗವಾಗಿ ಹೇಳಿದ್ದು, ನಾನು ವೈಯಕ್ತಿಕವಾಗಿ ಬಂದು ಭೇಟಿ ಮಾಡುತ್ತೇನೆ. ಅಲ್ಲದೇ ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ನಾವು ಉತ್ತಮ ಗೆಳೆಯರು. ಅವರ ಬಗ್ಗೆ ನನಗೆ ಅಭಿಮಾನ ಇದೆ, ನಾವು ಬೇರೆ ಪಕ್ಷದಲ್ಲಿ ಇದ್ದಾಗಿಂದಲೂ ಒಳ್ಳೆ ಸಂಬಂಧ ಹೊಂದಿದ್ದೆವು. ಅವರ ಮನದಾಳದ ಮಾತನ್ನು ತಿಳಿದುಕೊಂಡು ಹಿರಿಯರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.

ಇನ್ನು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಈ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿದೆ. ಒಂದು ತಿಂಗಳಲ್ಲಿ ಅರ್ಜಿ ವಿಚಾರಣೆಗೆ ಬರಲಿದ್ದು, ಅಲ್ಲಿ ಅನುಮತಿ ಸಿಗುವ ವಿಶ್ವಾಸ ಇದೆ. ಗೆಜೆಟ್ ನೋಟಿಫಿಕೆಷನ್ ಆದ ತಕ್ಷಣ ಕೆಲಸ ಆರಂಭ ಮಾಡುತ್ತೇವೆ, ನನಗೆ ಆ ಬಗ್ಗೆ ಮಾಹಿತಿ ಇದೆ. ನಾನು ಅದಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟಿದ್ದೇನೆ ಎಂದು ಸಿಎಂ ಹೇಳಿದರು.

error: Content is protected !!