ನವದೆಹಲಿ: ಹೊಟ್ಟೆನೋವಿನಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಂಧಿತ ಭೂಗತ ಪಾತಕಿ ಛೋಟಾರಾಜನ್ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.
ಈ ಬಗ್ಗೆ ತಿಹಾರ್ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದು, ಜುಲೈ 27ರಂದೇ ಹೊಟ್ಟೆನೋವು ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 61 ವರ್ಷದ ಛೋಟಾ ರಾಜನ್ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಹಿಂದೆ ಛೋಟಾ ರಾಜನ್ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭೂಗತ ಪಾತಕಿ ಛೋಟಾ ರಾಜನ್ ಇಂಡೋನೇಷಿಯಾದ ಬಾಲಿಯಲ್ಲಿ 2015ರಲ್ಲಿ ಬಂಧಿಸಲಾಗಿತ್ತು. ಅದಾದ ಬಳಿಕ ಭಾರತಕ್ಕೆ ವಾಪಸ್ ಕರೆತಂದು ತಿಹಾರ್ ಜೈಲಿನಲ್ಲಿ ಇಡಲಾಗಿತ್ತು. 2011ರಲ್ಲಿ ನಡೆದಿದ್ದ ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2018ರಲ್ಲಿ ಛೋಟಾ ರಾಜನ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇನ್ನು ಛೋಟಾ ರಾಜನ್ ಸಾಮಾನ್ಯ ಕ್ರಿಮಿನಲ್ ಅಲ್ಲ. ಅವನ ಕೇಸ್ಗಳನ್ನು ಉಳಿದವರ ಕೇಸ್ಗಳಂತೆ ಪರಿಗಣಿಸಬಾರದು ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಬಿಐ (CBI) ಬಾಂಬೆ ಹೈಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಿದೆ. ಛೋಟಾ ರಾಜನ್ ವಿರುದ್ಧ ವಿಚಾರಣೆ ಮಾಡಬೇಕಾದ ಹಲವು ಪ್ರಕರಣಗಳು ಬಾಕಿ ಇವೆ. ಅವನು ರಾಷ್ಟ್ರದ ಪಾಲಿಗೆ ಝಡ್ ಪ್ಲಸ್ ಸೆಕ್ಯೂರಿಟಿ ಬೆದರಿಕೆ ಎಂದು ವಿಶೇಷ ಸಾರ್ವಜನಿಕ ಪ್ರಾಸಿಕ್ಯೂಟರ್ ಪರ್ದೀಪ್ ಘಾರಟ್, ಬಾಂಬೆ ಹೈಕೋರ್ಟ್ನ ಅನುಜಾ ಪ್ರಭುದೇಸಾಯ್ ನೇತೃತ್ವದ ಪೀಠಕ್ಕೆ ತಿಳಿಸಿದ್ದಾರೆ. ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜಾಮೀನು ನೀಡುವಂತೆ ಛೋಟಾ ರಾಜನ್ ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.