ಕೂಗು ನಿಮ್ಮದು ಧ್ವನಿ ನಮ್ಮದು

ಮಂಡ್ಯ: ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಚಿನ್ನದ ಸರ ದರೋಡೆ ಮಾಡಿದ ಕಿರಾತಕರು

ಮಂಡ್ಯ: ಸಂಚರಿಸುತ್ತಿರುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವ ಕಿರಾತಕರು, ನಿದ್ದೆ ಬಂತೆಂದು ನೀವಾಗಿಯೇ ಕಾರು ನಿಲ್ಲಿಸಿದರೆ ಸುಮ್ಮನೆ ಬಿಟ್ಟಾರೇ? ಬೆಂಗಳೂರು-ಮೈಸೂರು ದಶಪಥ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ವಿಶ್ರಾಂತಿ ಮಾಡಲೆಂದು ಕಾರು ನಿಲ್ಲಿಸಿದಾಗ ಪೊಲೀಸರೆಂದು ಬೆದರಿಸಿ ನಂತರ ದರೋಡೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಐಶ್ವರ್ಯ ಕಾನ್ವೆಂಟ್ ಬಳಿ ನಡೆದಿದೆ.

ಇತ್ತೀಚಿಗಷ್ಟೇ ಎಡಿಜಿಪಿ ಅಲೋಕ್ ಕುಮಾರ್ ಬೆಂಗಳೂರು-ಮೈಸೂರು ಹೆದ್ದಾರಿ ಪರಿಶೀಲನೆ ನಡೆಸಿದ್ದರು. ಹೆದ್ದಾರಿ ನ್ಯೂನತೆ, ಅಪಘಾತ, ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಸೂಚನೆಯನ್ನೂ ನೀಡಿದ್ದರು. ವಿಪರ್ಯಾಸವೆಂದರೆ ಎಡಿಜಿಪಿ ಬಂದ ಹೋದ ದಿನವೇ ಪೊಲೀಸರೆಂದು ಹೇಳಿ ಈ ದರೋಡೆ ನಡೆಸಲಾಗಿದೆ.

ಬೆಂಗಳೂರಿನಿಂದ ಮಡಿಕೇರಿಗೆ ಕಡೆಗೆ ಹೋಗುತ್ತಿದ್ದ ಮಡಿಕೇರಿ ಮೂಲದ ಯುವಕ ಮುತ್ತಪ್ಪ, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಿಶ್ರಾಂತಿ ಪಡೆಯಲೆಂದು ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರ ಸೋಗಿನಲ್ಲಿ ಕಾರಿನ ಬಳಿ ಬಂದ ಮೂವರು ಕಿರಾತಕರು, ನಾವು ಪೊಲೀಸರು ಎಂದು ಹೇಳಿ ಧಮ್ಕಿ ಹಾಕಿದ್ದಾರೆ. ನಂತರ ತಪಾಸಣೆ ನೆಪವೊಡ್ಡಿ ಮುತ್ತಪ್ಪ ಅವರ ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಗಾಯಗೊಳಿಸಿ 3.50 ಲಕ್ಷ ಮೌಲ್ಯದ 65 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಗಸ್ತು ಪೊಲೀಸರು ಗಾಯಾಳು ಮುತ್ತಪ್ಪ ಅವರನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಮದ್ದೂರು ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

error: Content is protected !!