ಬೆಂಗಳೂರು: ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅದು ಎಷ್ಟರ ಮಟ್ಟಿಗೆ ಅಂದರೆ, ಪೊಲೀಸರನ್ನು ಬಿಡದ ಮಟ್ಟಕ್ಕೆ ಬಂದು ತಲುಪಿದೆ. ಹೌದು ಡಿಸಿಪಿ ಕಾರಿನಲ್ಲಿದ್ದ ಡಿಎಸ್ಸಿ ಕೀಯನ್ನೇ ಕಳ್ಳ ಎಗರಿಸಿದ ಘಟನೆ ಉಪ್ಪಾರಪೇಟೆ ಬಳಿ ಇರುವ ಬಿಬಿಎಂಪಿ ಕಚೇರಿ ಬಳಿ ನಡೆದಿದೆ. ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಆಗಿರುವ ಡಾ. ಸುಮನ್ ಪನ್ನೇಕರ್ ಅವರು ಬಿಬಿಎಂಪಿ ಕಚೇರಿ ಬಳಿ ತಮ್ಮ ಕಾರನ್ನು ನಿಲ್ಲಿಸಿ, ಇ- ತಂತ್ರಾಂಶದ ಸಹಿಗೆ ಬಳಸುವ ಡಿಎಸ್ಸಿ ಕೀಯನ್ನ ಕಾರಿನ ಸೀಟ್ ಮೇಲೆ ಬಿಟ್ಟು, ಕಾರು ಲಾಕ್ ಮಾಡುವುದನ್ನ ಮರೆತು ಕಚೇರಿಗೆ ಹೋಗಿದ್ದಾರೆ. ಈ ವೇಳೆ ಚಾಲಾಕಿ ಕಳ್ಳ ತನ್ನ ಕೈ ಚಳಕ ತೋರಿಸಿದ್ದಾನೆ.
ಪೊಲೀಸ್ ಠಾಣೆಗೆ ದೂರು
ಈ ಡಿಎಸ್ಸಿ ಕೀಯನ್ನು ಇ- ತಂತ್ರಾಂಶದ ಸಹಿಗೆ ಬಳಸಲಾಗುತ್ತದೆ. ಇದನ್ನು ಕಾರಿನಲ್ಲಿ ಇಟ್ಟು ಮರೆತು ಬಂದಿರುವುದು ಗೊತ್ತಾಗಿ, ಮತ್ತೆ ಕಾರಿನ ಬಳಿ ಬಂದಾಗ ಕಳ್ಳತನವಾಗಿರುವುದು ಬಯಲಾಗಿದೆ. ಕೂಡಲೇ ಡಿಸಿಪಿ ಡಾ. ಸುಮನ್ ಪನ್ನೇಕರ್ ಅವರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಷ್ಟು ದಿನ ಸಾರ್ವಜನಿಕರನ್ನ ಮಾತ್ರ ದೋಚುತ್ತಿದ್ದ ಕಳ್ಳರು ಇದೀಗ ಪೊಲೀಸರನ್ನು ಬಿಡದ ಪರಿಸ್ಥಿತಿ ಎದುರಾಗಿದೆ.
ಆದಾಯ ತೆರಿಗೆ ಅಧಿಕಾರಿ ಮನೆಯಲ್ಲಿ ಕಳ್ಳತನ
ಹೌದು ಹೈದರಾಬಾದ್ನಲ್ಲಿ ನಿವೃತ್ತ ಆದಾಯ ತೆರಿಗೆ ಇಲಾಖೆಯ ಕಮಿಷನರ್ ಸ್ಯಾಮ್ಯುಯೆಲ್ ಎಂಬುವವರು ಮನೆಯಲ್ಲಿ ಕಳ್ಳ ಕೈಚಳಕ ತೋರಿಸಿದ್ದ. ಇನ್ನು ಈ ಕಳ್ಳತನದ ಹಿಂದೆ ಪೊಲೀಸ್ ಅಧಿಕಾರಿಯ ಕೈವಾಡವಿದೆಯೆಂದು ಸ್ವತಃ ಕಳ್ಳ ಹೇಳಿದ್ದ. ಹೌದುನಿವೃತ್ತ ಕಮಿಷನರ್ ಸ್ಯಾಮ್ಯುಯೆಲ್ ಜಮೀನು ಖರೀದಿಸಲು ಮುಂದಾಗಿದ್ದು, ಈ ವೇಳೆ ಸುರೇಂದರ್ ಎಂಬ ವ್ಯಕ್ತಿ ಪರಿಚಯವಾಗಿತ್ತು. ಹಾಗಾಗಿ ಸುರೇಂದರ್ ಆಗಾಗ್ಗೆ ಸ್ಯಾಮ್ಯುಯೆಲ್ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಮನೆಗೆ ಬಂದಿದ್ದ ಸುರೇಂದರ್ ಟಿಫಿನ್ ಹಾಗೂ ಎಳೆನೀರು ತಂದಿದ್ದ. ಆದರೆ, ಆ ತೆಂಗಿನಕಾಯಿಯ ನೀರಿಗೆ ಮದ್ದು ಬೆರೆಸಿದ್ದ. ಎಳನೀರು ಕುಡಿದ ತಕ್ಷಣ ಸ್ಯಾಮುಯೆಲ್ ಪ್ರಜ್ಞೆ ತಪ್ಪಿಬಿದ್ದಿದ್ದ. ಈ ಸಂದರ್ಭದಲ್ಲಿ ಸುರೇಂದರ್ ಇದೇ ಅವಕಾಶ ಬಳಸಿಕೊಂಡು ಮನೆಯಲ್ಲಿನ 5 ಲಕ್ಷ ನಗದು ಹಾಗೂ 30 ತೊಲೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಇತನನ್ನ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಇದರಲ್ಲಿ ಪೊಲೀಸ್ ಅಧಿಕಾರಿಯ ಪಾಲು ಇದೆಯೆಂದು ಬಾಯ್ಬಿಟ್ಟಿದ್ದ.