ಮಾಗಡಿ: ಚಿರತೆಯ ದಾಳಿಗೆ ಮನೆಯ ಮುಂದೆ ಕಟ್ಟಿದ್ದ ಕರುವೊಂದು ಸಾವನಪ್ಪಿರುವ ಘಟನೆ ತಾಲೂಕಿನ ಕೋರಮಂಗಲ ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ. ಗ್ರಾಮದ ಅರುಣ್ ಎಂಬುವವರು ತಮ್ಮ ಮನೆಯ ಮುಂದೆ ಕಟ್ಟು ಹಾಕಿದ್ದ ಕರುವಿನ ಮೇಲೆ ದಾಳಿ ನಡೆಸಿದ ಚಿರತೆ ಕರುವನ್ನು ಬಲಿ ಪಡೆದುಕೊಂಡಿದೆ.
ಸುಮಾರು 30 ಸಾವಿರ ರೂ. ಬೆಲೆ ಬಾಳುವ ಕರು ಇದಾಗಿದ್ದು, ಕರುವನ್ನು ಕಳೆದುಕೊಂಡ ಅರುಣ್ ಕಂಗಾಲಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನ ಕೋರಮಂಗಲ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ನೆಮ್ಮದಿಯಾಗಿ ಜೀವನ ನಡೆಸುವುದೇ ಕಷ್ಟಕರವಾಗಿ ಪರಿಣಮಿಸಿದೆ.
ಪದೇ ಪದೇ ಗ್ರಾಮಗಳಿಗೆ ನುಗ್ಗುತ್ತಿರುವ ಚಿರತೆಯಿಂದ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದ್ದು, ಜನ ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆ ಸರಿ ಹಿಡಿಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ