ಕೂಗು ನಿಮ್ಮದು ಧ್ವನಿ ನಮ್ಮದು

ಚರ್ಮಗಂಟು ಕಾಯಿಲೆಗೆ ಮನೆ ಮದ್ದು: ಇಲ್ಲಿದೆ ಪಶುವೈದ್ಯರ ಸಲಹೆ

ಬೆಂಗಳೂರು: ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಚರ್ಮಗಂಟು ಕಾಯಿಲೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ’ದ ಸೋಲೂರು ಘಟಕದ ಪಶುವೈದ್ಯರು ಮನೆ ಮದ್ದು ಸಲಹೆ ನೀಡಿದ್ದಾರೆ. ಇದೊಂದು ವೈರಾಣು ಕಾಯಿಲೆಯಾಗಿದ್ದು ಸೊಳ್ಳೆ ಕಡಿತದಿಂದ ಹರಡುತ್ತದೆ. ಕಾಯಿಲೆ ಹರಡುವಿಕೆ ತಡೆಗೆ ಜಾನುವಾರುಗಳ ಕೊಟ್ಟಿಗೆಯನ್ನು ಶುಚಿಯಾಗಿಡುವುದು ಅಗತ್ಯ ಎಂದು ಪಶುವೈದ್ಯರು ಹೇಳಿದ್ದಾರೆ.

ಪಶುವೈದ್ಯರು ಸೂಚಿಸಿರುವ ಔಷಧಿ ಹೀಗಿದೆ:

100 ಗ್ರಾಂ ವೀಳ್ಯದೆಲೆ, 10 ಗ್ರಾಂ ಮೆಣಸು, 10 ಗ್ರಾಂ ಉಪ್ಪು, ಅರ್ಧ ಅಚ್ಚು ಬೆಲ್ಲವನ್ನು ರುಬ್ಬಿ ಉಂಡೆ ಮಾಡಿ 3ರಿಂದ 4 ಉಂಡೆಗಳನ್ನು ದಿನಕ್ಕೆ 2 ಬಾರಿ ತಿನ್ನಿಸಬೇಕು.

500 ಮಿಲಿ ಗ್ರಾಂ ಎಳ್ಳೆಣ್ಣೆ, 20 ಗ್ರಾಂ ಅರಶಿನ ಪುಡಿ, 100 ಗ್ರಾಂ ಮೆಹಂದಿ ಸೊಪ್ಪು, 100 ಗ್ರಾಂ ತುಳಸಿ ಎಲೆ, 100 ಗ್ರಾಂ ಬೇವಿನ ಸೊಪ್ಪು ಇವುಗಳ ಮಿಶ್ರಣವನ್ನು ಕುದಿಸಿ ಆರಿದ ನಂತರ ಜಾನುವಾರುಗಳ ಮೈಮೇಲಿನ ಗಂಟುಗಳ ಮೇಲೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚಬೇಕು.

ಹಾವೇರಿಯಲ್ಲಿ ನಿಷೇಧದ ನಡುವೆಯೂ ಜಾನುವಾರು ಸಂತೆ:

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಹೊರವಲಯದ ಎಪಿಎಂಸಿ ಸಮೀಪದ ಜಮೀನಿನಲ್ಲಿ ನಿಷೇಧದ ನಡುವೆಯೂ ಜಾನುವಾರು ಸಂತೆ ನಡೆಯುತ್ತಿದೆ. ಜಾನುವಾರುಗಳಿಗೆ ಚರ್ಮಗಂಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಜಾನುವಾರು ಜಾತ್ರೆ ನಿಷೇಧಿಸಿ ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಕೂಡ ಸಂತೆ ನಿಷೇಧ ಆದೇಶ ಹೊರಡಿಸಿದ್ದರು. ಇದನ್ನು ಲೆಕ್ಕಿಸದೆ ಸಂತೆ ಮುಂದುವರಿದಿದೆ. ಅಕ್ಟೋಬರ್ 9ರಿಂದ ನವಂಬರ್ 8 ರವರೆಗೆ ಜಿಲ್ಲೆಯಲ್ಲಿ ಜಾನುವಾರು ಸಂತೆ ನಡೆಯುತ್ತದೆ.

ಚರ್ಮಗಂಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಸಂತೆ ಹಾಗೂ ಸಾಗಣೆ ನಿಷೇಧಿಸಿ ಎಲ್ಲಾ ಜಿಲ್ಲಾಡಳಿತಗಳಿಗೆ ಪಶುಸಂಗೋಪನಾ ಇಲಾಖೆಯು ಅಕ್ಟೋಬರ್ 13ರಂದು ಸೂಚನೆ ನೀಡಿತ್ತು. ಜಾನುವಾರುಗಳಿಗೆ ಚರ್ಮಗಂಟು ರೋಗ ವಿಪರೀತವಾಗಿ ಹಬ್ಬುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೇ ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜಾನುವಾರುಗಳ ಸಂತೆಯನ್ನು ನಿಷೇಧಿಸಲಾಗಿದೆ ಎಂದು ಇಲಾಖೆ ಹೇಳಿತ್ತು.

error: Content is protected !!