ಮೈಸೂರು: ನಗರದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಾಮುಂಡಿಬೆಟ್ಟದಲ್ಲಿ ಈಗ ಮತ್ತೆ ಭೂಕುಸಿತ ಸಂಭವಿಸಿದ್ದು, ಬೆಟ್ಟದ ರಸ್ತೆಯ ಮುಕ್ಕಾಲು ಭಾಗ ಕುಸಿತಕ್ಕೆ ಒಳಗಾಗಿದೆ. ಕಳೆದ ತಿಂಗಳು ಭಾರಿ ಮಳೆಯಿಂದಾಗಿ ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ S.T ಸೋಮಶೇಖರ್ ಈಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಜೊತೆಗೆ ಮುಖ್ಯಮಂತ್ರಿ ಜೊತೆ ಮಾತನಾಡಿ ಶಾಶ್ವತ ಪರಿಹಾರ ಕಾಮಗಾರಿಗೆ ಕ್ರಮವಹಿಸಲಾಗುವುದು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ರು. ಆದ್ರೆ ಈಗ ಬೆಟ್ಟದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಇದರಿಂದ ಸ್ಥಳೀಯರಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ. ಚಾಮುಂಡಿ ಬೆಟ್ಟದಲ್ಲಿ ನಿರಂತರ ಅಭಿವೃದ್ಧಿ ಕಾಮಗಾರಿ, ನಿರ್ವಹಣೆ ವೈಫಲ್ಯ, ಮರಗಳ ಹನನ, ಬೆಟ್ಟದ ಮೇಲೆ ಹೆಚ್ಚುತ್ತಿರುವ ಒತ್ತಡಗಳು ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಬೆಟ್ಟದ ಮೇಲೆ ವಾಣಿಜ್ಯ ಸಂಕೀರ್ಣ, ಹೋಟೆಲ್, ಶೌಚಾಲಯ, ದಾಸೋಹ ಭವನ ಸೇರಿದಂತೆ ಅನೇಕ ಕಟ್ಟಡಗಳ ನಿರ್ಮಾಣವಾಗುತ್ತಿವೆ.
ಇವುಗಳಿಂದ ಬರುವ ಸಿವೇಜ್ ನೀರನ್ನು ರಸ್ತೆ ಪಕ್ಕದಲ್ಲಿ ಬಿಡಲಾಗುತ್ತಿದೆ. ಇದರಿಂದ ರಸ್ತೆಗಳಲ್ಲಿ ತೇವಾಂಶ ಹೆಚ್ಚಾಗಿ ಮಳೆ ಬಿದ್ದಾಗ ಕುಸಿತ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಬೆಟ್ಟದ ಸುತ್ತಮುತ್ತ ಒತ್ತುವರಿ ಮಾಡಿಕೊಂಡು ಮರಗಳನ್ನು ನಾಶ ಮಾಡಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಮತ್ತೆ ಭೂಕುಸಿತ ಸಂಭವಿಸುತ್ತಿದೆ. ಎಂಬ ಗಂಭೀರ ಆರೋಪವೂ ಹಲವರಿಂದ ವ್ಯಕ್ತವಾಗಿದೆ.