ಕೂಗು ನಿಮ್ಮದು ಧ್ವನಿ ನಮ್ಮದು

ಎರಡು ತಿಂಗಳ ಬಳಿಕ ಭಕ್ತರಿಗೆ ಮಹದೇಶ್ವರ ದರ್ಶನ ಭಾಗ್ಯ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯವು ನಾಳೆಯಿಂದ (ಜುಲೈ 5) ಭಕ್ತರ ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಬೆಳಿಗ್ಗೆ 6ರಿಂದ ಸಂಜೆ 6 ರವೆರಗೆ ಮಾತ್ರ ದರ್ಶನದ ವ್ಯವಸ್ಥೆಗೆ ಅನುವು ಮಾಡಲಾಗಿದೆ.

ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್ಡೌನ್ನಿಂದಾಗಿ ಕಳೆದ ಏಪ್ರಿಲ್ 22 ರಿಂದ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನೊಂದಿಗೆ ದೇವಾಲಯಗಳನ್ನು ಭಕ್ತರ ಪ್ರವೇಶಕ್ಕೆ ತೆರೆಯಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ ಬೆನ್ನಲ್ಲೇ, ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು, ಭಕ್ತರು ದೇವಾಲಯಕ್ಕೆ ಭೇಟಿ ನೀಡಿದಾಗ ಪಾಲಿಸಬೇಕಾದ ನಿಯಮಗಳನ್ನು ಪ್ರಕಟಿಸಿದೆ.

ಪ್ರತಿ ದಿನ ಬೆಳಿಗ್ಗೆ 6ರಿಂದ ಸಂಜೆ 6 ರವೆರಗೆ ಮಾತ್ರ ದರ್ಶನದ ವ್ಯವಸ್ಥೆ ಇರಲಿದೆ. ಮುಂದಿನ ಆದೇಶದವರೆಗೆ ದಾಸೋಹದ ವ್ಯವಸ್ಥೆ ಇಲ್ಲ. ಭಕ್ತರಿಗೆ ತೀರ್ಥ ಪ್ರಸಾದವನ್ನೂ ನೀಡಲಾಗುವುದಿಲ್ಲ. ಸೇವೆಗಳು ಹಾಗೂ ಉತ್ಸವಗಳು ನಡೆಯುವುದಿಲ್ಲ. ಮುಡಿ ಸೇವೆ ಇರುವುದಿಲ್ಲ. ಪ್ರಾಧಿಕಾರದ ಬಸ್ ಸೌಲಭ್ಯವೂ ಇರುವುದಿಲ್ಲ. ಬೆಟ್ಟದಲ್ಲಿ ರಾತ್ರಿ ತಂಗುವುದಕ್ಕೆ ಅವಕಾಶ ಇಲ್ಲ. ವಸತಿ ಗೃಹಗಳನ್ನು ಬಾಡಿಗೆಗೆ ಕೊಡುವುದಿಲ್ಲ. ಭಕ್ತರು ಸಂಜೆ 6ಗಂಟೆಯೊಳಗೆ ಬೆಟ್ಟದಿಂದ ತೆರಳಬೇಕು’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಭಕ್ತಾದಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಭಕ್ತರು ಕಡ್ಡಾಯವಾಗಿ ರಂಗಮಂದಿರಕ್ಕೆ ಬಂದು ಕೋವಿಡ್ ಮಾರ್ಗಸೂಚಿಯಂತೆ ವ್ಯವಸ್ಥೆ ಮಾಡಲಾಗುವ ಆಸನಗಳಲ್ಲಿ ಕುಳಿತುಕೊಂಡು ಅಥವಾ ಸರತಿ ಸಾಲಿನಲ್ಲಿ ನಿಂತುಕೊಂಡು ನೂಕುನುಗ್ಗಲಿಗೆ ಅವಕಾಶ ನೀಡದೆ ದೇವರ ದರ್ಶನ ಪಡೆಯಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

error: Content is protected !!