ಕೂಗು ನಿಮ್ಮದು ಧ್ವನಿ ನಮ್ಮದು

2,667 ಕೋಟಿ ರೂಪಾಯಿ ಯೋಜನೆಗೆ ಸಂಪುಟ ಅನುಮೋದನೆ ಮೂಲ ಸೌಕರ್ಯಕ್ಕೆ ಆದ್ಯತೆ. ಕಲ್ಯಾಣ, ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಸಮಗ್ರ ನೆರವು

ಬೆಳಗಾವಿ: ಬೆಳಗಾವಿ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಬಸವರಾಜ್ ಬೊಮ್ಮಾಯಿ ಸಂಪುಟವು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕವನ್ನೊಳಗೊಂಡ ಸಮಗ್ರ ಕರ್ನಾಟಕಕ್ಕೆ ಭರಪೂರ ನೆರವು ಹರಿಸುವ ತೀರ್ಮಾನ ಕೈಗೊಂಡಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ನೀರಾವರಿ ರೈಲ್ವೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಸಂಬಂಧ ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಸರಿಸುಮಾರು 2,667 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಅನುಮತಿಸಲಾಗಿದೆ. ವಿಧಾನಸಭೆ ಅಧಿವೇಶನ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಸರ್ಕಾರ ತೀರ್ಮಾನವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿಲ್ಲ.

Tv1pro ಸುದ್ದಿ ಜಾಲಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಧಾರವಾಡ, ಕಿತ್ತೂರು, ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣ 73 ಕಿಲೋ ಮೀಟರ್ ಗೆ 927.40 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದ್ದು, ಜಲಜೀವನ್ ಮಿಷನ್ ಯೋಜನೆಯಡಿ ಹಾವೇರಿ ಜಿಲ್ಲೆಯ ಹಾವೇರಿ, ಸವಣೂರು, ಶಿಗ್ಗಾವ್ ಮತ್ತು ಹಾನಗಲ್ ತಾಲೂಕುಗಳ 285 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು 645 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಬಿಒಟಿ ಆಧಾರದ ಮೇಲೆ ಅನುಷ್ಠಾನಕ್ಕೆ ಅನುಮತಿ ನೀಡಲಾಗಿದೆ. ದ್ರಾಕ್ಷಿ ಹೆಚ್ಚಾಗಿ ಬೆಳೆಯುವ ಪ್ರದೇಶಕ್ಕೆ ಪ್ರೋತ್ಸಾಹ ನೀಡಲು ವೈನ್ ಬೋರ್ಡ್ ವ್ಯಾಪ್ತಿ ವಿಸ್ತರಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ವೈನ್ ಬೋರ್ಡ್ ಅನ್ನು ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಎಂಬುದಾಗಿ ಪುನಾರಚನೆ ಮಾಡುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನಂತೆ ಪ್ರಾದೇಶಿಕ ಅಸಮತೋಲನ ನಿವಾರಿಸಲು ಜಾರಿಯಲ್ಲಿರುವ ವಿಶೇಷ ಅಭಿವೃದ್ಧಿ ಯೋಜನೆಯನ್ನು ಪ್ರಾದೇಶಿಕ ಸಮತೋಲನ ಯೋಜನೆ ಎಂದು ಮರುನಾಮಕರಣ ಮಾಡಿ ಅನುಷ್ಠಾನ ನೀತಿ ಆಯೋಗ ಸೂಚಿಸಿರುವ 49 ಸೂಚಕಗಳ ಅಳವಡಿಕೆ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅನುಷ್ಠಾನಗೊಳಿಸುತ್ತಿರುವ ಸುರಪುರ, ಶಹಪುರ ಮತ್ತು ತಾವರಗೆರೆ ಪಟ್ಟಣಗಳ ಕುಡಿಯುವ ನೀರಿನ ಯೋಜನೆಗಳ ಒಟ್ಟಾರೆ 381.87 ಕೋಟಿ ರೂಪಾಯಿ ಪರಿಷ್ಕೃತ ಯೋಚನೆ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿಯಿಂದ ನೀರೆತ್ತಿ 3,150 ಹೆಕ್ಟೇರ್ ಗೆ ನೀರಾವರಿ ಸೌಲಭ್ಯ ಕಲ್ಪಿಸುವ 143.80 ಕೋಟಿ ರೂಪಾಯಿ ಹೆಡ್ಡಳ್ಳಿ ಮತ್ತು ತೆರ್ನಳ್ಳಿ ಏತ ನೀರಾವರಿ ಯೋಜನೆಗೆ ಅಸ್ತು ಎನ್ನಲಾಗಿದೆ. ಆಲಮಟ್ಟಿ ಎಡದಂಡೆ ಕಾಲುವೆಯ ಕಿಲೋ ಮೀಟರ್ ಶೂನ್ಯದಿಂದ 68.24 ರವರೆಗೆ ಬಾಕಿ ಉಳಿದ ಕಾಲುವೆ ಜಾಲ ಹಾಗೂ ವಿತರಣಾ ಕಾಲುವೆಗಳ ಸ್ಟ್ರಕ್ಚರ್ ಒಳಗೊಂಡು ಆಧುನೀಕರಣ ಕಾಮಗಾರಿಗೆ 75.41 ಕೋಟಿ ರೂಪಾಯಿ ಮತ್ತು ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ತಳಬಾಳು ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿನ ಒಟ್ಟು 26.20 ಎಕರೆ ಪಟ್ಟಾ ಜಮೀನಿನ ಬದಲಾಗಿ ಅದೇ ಗ್ರಾಮದ ಒಟ್ಟು 24.21 ಎಕರೆ ಸರ್ಕಾರಿ ಜಮೀನನ್ನು ಏಕಸ್ ಎಸ್ಇಝೆಡ್ ಕಂಪನಿಗೆ ಕೈಗಾರಿಕಾ ಉದ್ದೇಶಕ್ಕಾಗಿ ಮಂಜೂರು ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಸಂಪುಟದ ಇತರ ವಿಚಾರಗಳು

1) ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ಮೆಕಾನಿಕಲ್ ವಿಭಾಗದ ಹೊಸ ಕಟ್ಟಡ ನಿರ್ಮಾಣಕ್ಕೆ ₹85 ಕೋಟಿ

2) ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಚೆಸ್ಕಾಂ) ಹಣಕಾಸು ಸ್ಥಿತಿಗತಿ ಸುಧಾರಣೆಗಾಗಿ ಸಾಲದ ಪುನಾರಚನೆ, ಬಡ್ಡಿ ರಹಿತ ಸಾಲಗಳನ್ನು ಷೇರು ಬಂಡವಾಳವಾಗಿ ಪರಿವರ್ತನೆ.

3) ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹೆಚ್ಚುವರಿ ಯಾಗಿ ₹ 50 ಕೋಟಿ ಷೇರು ಬಂಡವಾಳ.

4) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) 2021 ವಿಧೇಯಕಕ್ಕೆ ಅನುಮೋದನೆ.

5) 2022- 22 ನೇ ಸಾಲಿನ ಐಇಬಿಆರ್ ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಅವಧಿ ಸಾಲಗಳ ಮೂಲಕ 650 ಕೋಟಿ ರೂಪಾಯಿ ಎತ್ತುವಳಿಗೆ ಸರ್ಕಾರಿ ಖಾತ್ರಿ. ಇದೇ ಯೋಜನೆಯಡಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 250 ಕೋಟಿ ರೂಪಾಯಿ ಕಾವೇರಿ ನೀರಾವರಿ ನಿಗಮಕ್ಕೆ250 ಕೋಟಿ ರೂಪಾಯಿ ಕೃಷ್ಣ ಭಾಗ್ಯ ಜಲ ನಿಗಮಕ್ಕೆ 500 ಕೋಟಿ ರೂಪಾಯಿ ಸಂಗ್ರಹಿಸಲು ಸರ್ಕಾರದ ಖಾತ್ರಿ.

6) ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಪುರಸಭೆ ವ್ಯಾಪ್ತಿಯಲ್ಲಿರುವ ಹೇಮಾವತಿ ಬಡಾವಣೆ ಮತ್ತು ಟಿಬಿ ಬಡಾವಣೆಯಲ್ಲಿನ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮಗಳ ಬಗ್ಗೆ ಲೋಕಾಯುಕ್ತರು ಸಲ್ಲಿಸಿದ ವರದಿ ಬಗ್ಗೆ ತೀರ್ಮಾನ.

7) ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ

error: Content is protected !!