ಚಿಕ್ಕಮಗಳೂರು: ಮತದಾರರ ತೀರ್ಪನ್ನು ನಾನು ಗೌರವಿಸುತ್ತೇನೆ. ಕಾಂಗ್ರೆಸ್ಸಿಗರ ರೀತಿ ಗೆದ್ದಾಗ ಪ್ರಜಾಪ್ರಭುತ್ವದ ತೀರ್ಪು ಅನ್ನೋದು, ಸೋತಾಗ ಇವಿಎಂ ಮೇಲೆ ದೂರುವ ಕೆಲಸವನ್ನು ಮಾಡುವುದಿಲ್ಲ. ಜನರು ನೀಡಿದ ತೀರ್ಪನ್ನು ಗೌರವಿಸುತ್ತೇನೆ, ಸ್ವಾಗತ ಮಾಡುತ್ತೇನೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಸಿದ್ಧಾಂತದ ಕಾರಣಕ್ಕೆ ನಾವು ಬಿಜೆಪಿಗೆ ಬಂದಿರುವುದು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನವನ್ನು ಮಾಡುತ್ತೇವೆ. ಚುನಾವಣೆಯಲ್ಲಿ ನನ್ನ ಸೋಲಿಗೆ ಹಲವು ಕಾರಣಗಳಿವೆ. ಏನು ಇಲ್ಲದ ಕಾಲದಲ್ಲಿ ನಾವು ಪಕ್ಷವನ್ನು ಕಟ್ಟಿದ್ದೇವೆ ಹೆದರುವ ಪ್ರಶ್ನೆಯೇ ಇಲ್ಲ. ನಾವು ಈ ಸೋಲಿನ ಬಗ್ಗೆ ಅವಲೋಕನ ಮಾಡಿಕೊಳ್ಳುತ್ತೇವೆ ಎಂದರು.
ಚಿಕ್ಕಮಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ. ನನ್ನನ್ನು ಸೋಲಿಸಲು ಕಾಂಗ್ರೆಸ್ಗೆ ಜೆಡಿಎಸ್ ಬೆಂಬಲ ನೀಡಿತ್ತು. ನೇರವಾಗಿ ನನ್ನ ಸೋಲಿಸಲು ಜೆಡಿಎಸ್ ಟಾರ್ಗೆಟ್ ಮಾಡಿ ಕಾಂಗ್ರೆಸ್ ಗೆ ಬೆಂಬಲಿಸಿತ್ತು. ಹಲವು ನಾಯಕರ ಕೆಂಗಣ್ಣಿಗೆ ನಾನು ಗುರಿಯಾಗಿದ್ದೆ. ಪಕ್ಷ, ನನ್ನ ಸಿದ್ಧಾಂತದ ಕಾರಣಕ್ಕೆ ನಾನು ಹಲವರಿಗೆ ಗುರಿಯಾಗಿದ್ದೆ ಎಂದು ಹೇಳಿದ್ದಾರೆ.
ರಾಜ್ಯದ ಜನರಿಗೆ ನೀಡಿದ ಭರವಸೆಯನ್ನು ಕಾಂಗ್ರೆಸ್ ಈಡೇರಿಸಲಿ. ರಾಜ್ಯವನ್ನು ಅಭಿವೃದ್ಧಿ ಕಡೆ ಕಾಂಗ್ರೆಸ್ ತೆಗೆದುಕೊಂಡು ಹೋಗಲಿ. ಕಾಂಗ್ರೆಸಿನ ಹನಿಮೂನ್ ಪೀರಿಯಡ್ ಮುಗಿಯಲಿ ನಾವು ಎಚ್ಚರಿಸುವ ಕೆಲಸವನ್ನು ಮಾಡುತ್ತೇವೆ. ಕಾಂಗ್ರೆಸ್ನವರಿಗೆ ಎಚ್ಚರಿಸುತ್ತಾ ಜನರ ಜೊತೆಗಿದ್ದು ರಾಜಕಾರಣವನ್ನು ಮಾಡುತ್ತೇನೆ ಎಂದು ಹೇಳಿದರು.
ಎಲ್ಲ ಕಾರಣದಿಂದ ಅವರು ಇಂದು ಸಫಲರಾಗಿದ್ದಾರೆ. ನನ್ನ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವುದು ನನ್ನ ಜವಾಬ್ದಾರಿ. ಸಂಘಟನೆಯ ಲೋಪಗಳಿದ್ದರೇ, ಸಮಲೋಚನೆ ಮಾಡಿ ಸರಿಪಡಿಸುತ್ತೇವೆ. ಎಲ್ಲವೂ ನಮ್ಮ ಕೈಯಲ್ಲಿ ಬಂದಿದೆ ಅಂದುಕೊಂಡಿದ್ದಾರೆ. ಹಿಂದುತ್ವದ ವಿಷಯದಲ್ಲಿ ನಿನ್ನೆ ಕೆಲವು ಕಡೆ ಆಟೋಟೋಪ ಮೆರೆದಿದ್ದಾರೆ. ಹಿಂದುತ್ವದ ವಿಷಯದಲ್ಲಿ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಸೂಚನೆ ನೀಡಿದರು.