ನವದೆಹಲಿ: ಮತದಾರರೇ ಕುಮಾರಸ್ವಾಮಿ ಅವರಿಗೆ ಮತ ಹಾಕಬೇಡಿ. ಅವರು ಮುಖ್ಯಮಂತ್ರಿ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಭಾನುವಾರ ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕುಮಾರಸ್ವಾಮಿಯವರು ಸಿಎಂ ಆಗಲ್ಲ ಅಂತ ನಾನು ಹೇಳ್ತಾ ಇಲ್ಲ. ಬದಲಾಗಿ ಅವರೇ ಹೇಳಿರುವ ಮಾತು. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅವರೇ ಹೇಳಿದ್ದಾರೆ. ಅಲ್ಲದೇ, ಮೈಸೂರು ಭಾಗದಲ್ಲಿ ಒಕ್ಕಲಿಗರು ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ನಿರ್ಧಾರ ಮಾಡಿದ್ದು, ಬೇರೆ ಹಿಂದೂಗಳಿಗೆ ಮತ ಹಾಕ್ತಾರೆ ಎಂದು ಟಾಂಗ್ ಕೊಟ್ಟರು
ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದ ಪ್ರಹ್ಲಾದ್ ಜೋಶಿ ಅವರನ್ನು ಮುಂಬರುವ ಚುನಾವಣೆ ಬಳಿಕ ಈ ರಾಜ್ಯದ ಮುಖ್ಯಮಂತ್ರಿ ಮಾಡುವ ಹುನ್ನಾರ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ನಡೆದಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಬೇರೆ ಪಕ್ಷದ ತೀರ್ಮಾನ ಅವರಿಗೆ ಯಾಕೆ ಬೇಕು?. ಕುಮಾರಸ್ವಾಮಿ ಹೇಳಿಕೆ ಹತಾಶೆಯಿಂದ ಕೂಡಿದೆ. ಹಿಂದೂಗಳನ್ನು ಒಡೆದಾಳುವ ಕುಟಿಲ ನೀತಿ ಮೀರಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿಯವರು ನಮ್ಮ ಸಂಸದೀಯ ಮಂಡಳಿಯಲ್ಲಿ ಇಲ್ಲ. ಸಿಎಂ ಯಾರಾಗಬೇಕು ಎನ್ನುವುದನ್ನು ನಮ್ಮ ಸಂಸದೀಯ ಮಂಡಳಿ ನಿರ್ಧಾರ ಮಾಡುತ್ತೆ. ಪ್ರಹ್ಲಾದ ಜೋಶಿಗೆ ತಮ್ಮ ಜಾತಿ ಹೇಳಿಕೊಂಡು ಮತಕೇಳುವ ಅಗತ್ಯ ಇಲ್ಲ. ಅಧಿಕಾರಕ್ಕಾಗಿ ಯಾರು, ಯಾರ ಕಾಲಿಗೆ ಬಿದ್ದಿದ್ದಾರೆ ಎನ್ನುವುದು ಗೊತ್ತಿದೆ ಎಂದು ಕುಟುಕಿದರು.
ಕುಮಾರಸ್ವಾಮಿ ಅವರ ಹೇಳಿಕೆ ದೇವೇಗೌಡರ ಭಾವನೆಗೂ ಧಕ್ಕೆ ತರುವಂತಹದ್ದಾಗಿದೆ. ದೇವೇಗೌಡರ ಮಗನಾಗಿ ಸರಿಯಾಗಿ ಮಾತನಾಡಬೇಕು. ಜೋಶಿಯವರು ಕುಮಾರಸ್ವಾಮಿ ರೀತಿ ಲಕ್ಕಿ ಮ್ಯಾನ್ ಅಲ್ಲ. ಅವರು ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. ಎಲ್ಲರ ಬೆಂಬಲ ಪಡೆದು ನಾಯಕರಾಗಿದ್ದಾರೆ. ಇನ್ನು, ಆರ್‌ಎಸ್‌ಎಸ್ ಎಂದರೆ ಏನು ಎಂಬುದು ಅವರಿಗೆ ಈ ಜನ್ಮದಲ್ಲಿ ಅರ್ಥ ಆಗಲು ಸಾಧ್ಯವಿಲ್ಲ. ಸ್ವಯಂ ಸೇವಕರಾದವರಿಗೆ ಮಾತ್ರ ಆರ್‌ಎಸ್‌ಎಸ್ ಏನು ಎಂಬುದು ಅರ್ಥ ಆಗುತ್ತೆ ಎಂದರು.
ನಮ್ಮ ಕುಟುಂಬದ ಟಿಕೆಟ್ ಬಗ್ಗೆ ವರಿಷ್ಠರು ತೀರ್ಮಾನ: ಎಚ್‌ಡಿಕೆ
ಮೈಸೂರು: ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಕುಟುಂಬದಲ್ಲಿ ಟಿಕೆಟ್ ಹಂಚಿಕೆಯಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಎಚ್.ಡಿ.ರೇವಣ್ಣನವರು ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವ ವಿಚಾರ ಗೊತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ 40-50 ಸ್ಥಾನಗಳಿಗೆ ಸೀಮಿತವಾಗಿಲ್ಲ. 123 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಎಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಜನಿಸಿದ್ದೇ ನನ್ನ ಪುಣ್ಯ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿಯವರ ಮಗನಾಗಿ ಜನಿಸಿದ್ದು ನನ್ನ ಭಾಗ್ಯ ಎಂದರು.