ಚಿಕ್ಕಮಗಳೂರು: ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಇಲ್ಲೊಬ್ಬ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ನಾಲ್ಕು ಪಟ್ಟು ಹೆಚ್ಚು ಹಣ ಪಡೆದಿದ್ದಾನೆ. ಹೌದು, ಕಡೂರಿನಿಂದ ಚಿಕ್ಕಮಗಳೂರಿಗೆ ಹೊರಟ್ಟಿದ್ದ ಆಂಧ್ರ ಮೂಲದ ಪ್ರವಾಸಿಗರಿಗೆ ಮಂಗಳೂರು ಟಿಕೆಟ್ ನೀಡಿ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಯಾಮಾರಿಸಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಬಸ್ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಆಂಧ್ರ ಪ್ರದೇಶ ಮೂಲದ ಪ್ರವಾಸಿಗರು ಆಗಮಿಸಿದ್ದರು. ಕಡೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಆಂಧ್ರ ಮೂಲದ ಪ್ರವಾಸಿಗರಿಗೆ ಚಿಕ್ಕಮಗಳೂರಿಗೆ ಟಿಕೆಟ್ ನೀಡುವ ಬದಲು ಮಂಗಳೂರಿಗೆ ಟಿಕೆಟ್ ನೀಡಿ ಕೆಎಸ್‌ಆರ್‌ಟಿಸಿ ನಿರ್ವಾಹಕ ಎಡವಟ್ಟು ಮಾಡಿದ್ದಾನೆ.
45 ರೂ. ಟಿಕೆಟ್ ನೀಡುವ ಬದಲು 202 ರೂಪಾಯಿ ಟಿಕೆಟ್ ನೀಡಿರುವ ನಿರ್ವಾಹಕ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಆಂಧ್ರ ಪ್ರದೇಶದಿಂದ ರೈಲಿನ ಮೂಲಕ ಕಡೂರಿಗೆ ಬಂದಿದ್ದ 18 ಜನ ಪ್ರವಾಸಿಗರು ಚಿಕ್ಕಮಗಳೂರಿನ ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ್ದರು. ನಿರ್ವಾಹಕ ಒಂದು ಟಿಕೆಟ್‌ಗೆ 202ರಂತೆ 18 ಪ್ರಯಾಣಿಕರಿಗೆ 3,636 ರೂಪಾಯಿ ಪಡೆದು ಟಿಕೆಟ್ ನೀಡಿದ್ದಾರೆ.
ಆಗ ಪ್ರವಾಸಿಗರು ಕಡೂರಿನಿಂದ 40 ಕಿಲೋ ಮೀಟರ್ ದೂರದ ಚಿಕ್ಕಮಗಳೂರಿಗೆ 202 ರೂಪಾಯಿ ಏಕೆ ಎಂದು ಪ್ರವಾಸಿಗರು ಪ್ರಶ್ನಿಸಿದ್ದಾರೆ. ಇದರ ಜೊತೆ ಪ್ರಯಾಣಿಕರು ಚಿಕ್ಕಮಗಳೂರಲ್ಲಿ ಇಳಿಯುತ್ತಿದ್ದಂತೆ ನಿರ್ವಾಹಕ ಅವರ ಬಳಿ ಟಿಕೆಟ್ ವಾಪಸ್ ಕೇಳಿದ್ದಾರೆ. ಆಗ ಇತರ ಪ್ರಯಾಣಿಕರಿಗೂ ಈ ವಿಷಯ ಗೊತ್ತಾಗಿದ್ದು, ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ ಸರ್ಕಾರ ಬಸ್‌ಗಳಲ್ಲಿ ಉಚಿತ ಪ್ರಯಾಣದ ಬಗ್ಗೆ ಮಾತನಾಡುತ್ತಿರುವಾಗ ನಿರ್ವಾಹಕರ ಈ ರೀತಿಯ ವರ್ತನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.