ಸುಟ್ಟ ಗಾಯ : ದಿನನಿತ್ಯದ ಅಡುಗೆ ಕೆಲಸದಲ್ಲಿ ತೊಡಗಿದಾಗ, ಕುದಿಯುವ ನೀರು, ಎಣ್ಣೆ-ತುಪ್ಪ ಹಾಲು, ಚಹಾ, ಕಾಫಿ ಅಥವಾ ಯಾವುದೇ ರಾಸಾಯನಿಕ ಪದಾರ್ಥ ದೇಹದ ಮೇಲೆ ಆಕಸ್ಮಿಕವಾಗಿ ಬೀಳುವುದರಿಂದ, ಚರ್ಮ ಮತ್ತು ಅದರ ಕೆಳಗಿನ ಭಾಗ ಸುಟ್ಟುಹೋಗುತ್ತದೆ. ಪರಿಣಾಮ, ಗಾಯ, ಗುಳ್ಳೆಗಳಾಗುತ್ತವೆ. ಗುಳ್ಳೆಗಳಲ್ಲಿ ನೀರು ತುಂಬಿ, ಸುತ್ತಲಿನ ಚರ್ಮ ಕೆಂಪಗಾಗುತ್ತದೆ. ವಿಪರೀತ ಉರಿತದ ಅನುಭವವಾಗುತ್ತದೆ. ಗಾಯದಲ್ಲಿ ಕೀವು ಕೂಡ ಆಗಬಹುದು. ಗಾಯದಲ್ಲಿ ತುರಿಕೆಯಿಂದ, ತೋರಿಸಿಕೊಂಡಾಗ, ಚರ್ಮದ ಮೇಲೆ ಸ್ಥಾಯಿಯಾಗಿ ಕಲೆಯು ಕೂಡ ಉಳಿದುಬಿಡುತ್ತದೆ. ಇಂಥ ಸ್ಥಿತಿಯಲ್ಲಿ ಈ ಕೆಳಗಿನ ಉಪಚಾರ ಮಾಡಿ.
1) ಅತ್ತಿಯಮರದ ಎಲೆಗಳನ್ನು ಅರೆದು, ಅದರ ಚೂರ್ಣ ದಲ್ಲಿ ಜೇನುತುಪ್ಪ ಬೆರೆಸಿ, ಸುಟ್ಟಿರುವ ಭಾಗದಲ್ಲಿ ಲೇಪಿಸುವುದರಿಂದ ಉರಿತ ಕಡಿಮೆಯಾಗುತ್ತದೆ.
2) ಗುಲಾಬಿಯ ನೀರಿನಲ್ಲಿ ಜೇನುತುಪ್ಪ ಸೇರಿಸಿ ಲೇಪಿಸುವುದರಿಂದ, ಉರಿತ ಕಡಿಮೆಯಾಗುತ್ತದೆ. ಮತ್ತು ಸುಟ್ಟ ಕಲೆಯು ಉಳಿಯುವುದಿಲ್ಲ.
3) ಸುಟ್ಟ ಭಾಗದಲ್ಲಿ ಜೇನುತುಪ್ಪ ಲೇಪಿಸುವುದರಿಂದ, ತ್ವಚೆಯ ಉರಿ ಕಡಿಮೆಯಾಗುತ್ತದೆ. ಅಲ್ಲದೆ ಸುಟ್ಟ ಗಾಯದ ಕಲೆಯು ಉಳಿಯುವುದಿಲ್ಲ.
4) ಬಬುಲ್ ಅಂದರೆ ಜಾಲಿಗಿಡದ ಅಂಟನ್ನು ನೀರಿನಲ್ಲಿ ಕರಗಿಸಿ, ಅದರಲ್ಲಿ ಜೇನುತುಪ್ಪ ಸೇರಿಸಿ, ಸುಟ್ಟಗಾಯಕ್ಕೆ ಲೇಪಿಸಿದರೆ ಹಿತವಾಗುತ್ತದೆ.