ಕೂಗು ನಿಮ್ಮದು ಧ್ವನಿ ನಮ್ಮದು

ಸೀಮೆಎಣ್ಣೆ ಕೊರತೆ ಹಿನ್ನೆಲೆ ದೋಣಿಗಳಿಗೆ ಲಂಗರು ಹಾಕಿದ ಮೀನುಗಾರರು; ಸರ್ಕಾರಕ್ಕೆ ಉಗ್ರ ಪ್ರತಿಭಟನೆಯ ಎಚ್ಚರಿಕೆ

ಉಡುಪಿ: ಕರಾವಳಿ ಭಾಗದಲ್ಲಿ ಮೀನುಗಾರಿಕೆ ನಡೆಸುವ ಬಹುತೇಕ ದೋಣಿಗಳು ಸೀಮೆಎಣ್ಣೆ ಚಾಲಿತವಾಗಿವೆ. ದಕ್ಷಿಣ ಕನ್ನಡದ 1,345, ಉಡುಪಿ 4,896, ಉತ್ತರ ಕನ್ನಡ 1,789 ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಒಟ್ಟು 8,030 ಸೀಮೆಎಣ್ಣೆ ಚಾಲಿತ ದೋಣಿಗಳಿದ್ದು, ಮಾಸಿಕ 300 ಲೀಟರ್‌ನಂತೆ ವಾರ್ಷಿಕ 24,090 ಕೆ.ಎಲ್‌. ಸೀಮೆಎಣ್ಣೆ ಅಗತ್ಯವಿದೆ. ಒಂದು ದೋಣಿಯಲ್ಲಿ ಕನಿಷ್ಠ 6ರಂತೆ ಒಟ್ಟು 60,500 ನಾಡದೋಣಿ ಮೀನುಗಾರರಿದ್ದಾರೆ. ರಾಜ್ಯ ಸರಕಾರದ ಆದೇಶದಂತೆ ನಾಡದೋಣಿ ಮೀನುಗಾರರಿಗೆ ಆಗಸ್ಟ್‌ನಿಂದ ಸೀಮೆಎಣ್ಣೆ ಬಿಡುಗಡೆಯಾಗಬೇಕಿತ್ತಾದರೂ ಆಗಿಲ್ಲ. ಪ್ರಸ್ತುತ ಮೀನುಗಾರಿಕೆಗೆ ಉತ್ತಮ ಅವಕಾಶ ಇದ್ದರೂ ಸೀಮೆಎಣ್ಣೆ ಸಿಗದ ಕಾರಣ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಬೇರೆ ಆದಾಯ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಮೀನುಗಾರರು ಹೇಳುತ್ತಾರೆ.

2013ರಿಂದ ಸರಕಾರದ ಆದೇಶದಂತೆ ನಾಡದೋಣಿಗಳಿಗೆ ಮಾಸಿಕ 300 ಲೀಟರ್‌ನಂತೆ ಸೀಮೆಎಣ್ಣೆ ನೀಡಲಾಗುತ್ತದೆ. ಆ ಅವಧಿಯಲ್ಲಿ ರಾಜ್ಯದಲ್ಲಿ 4,514 ನಾಡದೋಣಿಗಳಿದ್ದವು. ಆ ಪ್ರಕಾರವೇ ಪ್ರಸ್ತುತ ದಿನದಲ್ಲೂ ಸೀಮೆಎಣ್ಣೆ ಬಿಡುಗಡೆಯಾಗುತ್ತದೆ. ಪ್ರಸ್ತುತ 8,030 ನಾಡ ದೋಣಿಗಳಿದ್ದರೂ ಸರಕಾರ ಸೀಮೆ ಎಣ್ಣೆ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸರಿಯಾಗಿ ಸೀಮೆಎಣ್ಣೆ ಪೂರೈಕೆ ಆಗದ ಮತ್ತು ಹೆಚ್ಚುವರಿ ಸೀಮೆಎಣ್ಣೆ ಪೂರೈಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಮೀನುಗಾರರು ಮುಂದಾಗಿದ್ದಾರೆ. ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ಸೀಮೆಎಣ್ಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನ.7ರಂದು ರಾಜ್ಯ ಕರಾವಳಿಯ 3 ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಎದುರು ಏಕಕಾಲದಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದೆ. ಉಡುಪಿಯಲ್ಲಿ 20 ಸಾವಿರ ಮೀನುಗಾರರು ಸೇರಲಿದ್ದು, ಬೆಳಗ್ಗೆ 10ಕ್ಕೆ ಎಂಜಿಎಂ ಕಾಲೇಜು ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಹಕ್ಕೊತ್ತಾಯ ನಡೆಸಲಿದ್ದಾರೆ.

ಒಟ್ಟಾರೆಯಾಗಿ ರಾಜ್ಯದ ಕರಾವಳಿಯಲ್ಲಿರುವ 8,030 ದೋಣಿಗಳಿದ್ದು, ಎಲ್ಲದಕ್ಕೂ 300 ಲೀಟರ್‌ಗಳಂತೆ ಸೀಮೆಎಣ್ಣೆ ಒದಗಿಸುವಂತೆ ಕೋರಿ ಮೀನುಗಾರರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಮೀನುಗಾರರ ಮನವಿಗೆ ಸರಕಾರ ಶೀಘ್ರ ಸ್ಪಂದನೆ ನೀಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಮೀನುಗಾರರು ನೀಡಿದ್ದಾರೆ

error: Content is protected !!