ಬೆಂಗಳೂರು: ಬಿಜೆಪಿ ಸೋಲಿನ ಪರಾಮರ್ಶನಾ ಸಭೆಗೆ ಮಾಜಿ ಸಚಿವ ಕೆ ಸುಧಾಕರ್, ವಿ ಸೋಮಣ್ಣ ಮತ್ತು ಜೆ.ಸಿ ಮಾಧುಸ್ವಾಮಿ ಗೈರು ಹಾಜರಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ಪ್ರಭಾವಿ ಸಚಿವರಾಗಿದ್ದ ಈ ಮೂವರ ಗೈರು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸೋತ ಅಭ್ಯರ್ಥಿಗಳ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಸಭೆಯಲ್ಲಿ ಸೋಲಿನ ಪರಾಮರ್ಶೆಯನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಈ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್, ಸಿಪಿ ಯೋಗೀಶ್ವರ್, ಮುರುಗೇಶ್ ನಿರಾಣಿ, ಬಿಸಿ ನಾಗೇಶ್, ಬಿಸಿ ಪಾಟೀಲ್, ಶ್ರೀರಾಮುಲು, ಪ್ರೀತಂ ಗೌಡ, ಗೋವಿಂದ ಕಾರಜೋಳ, ನಾರಾಯಣ ಗೌಡ ಭಾಗಿಯಾಗಿದ್ದಾರೆ.
ಕಾರಣ ತಿಳಿದು ಬಂದಿಲ್ಲ
ಆದರೆ ಮಾಜಿ ಸಚಿವರಾದ ಕೆ ಸುಧಾಕರ್, ವಿ ಸೋಮಣ್ಣ ಹಾಗೂ ಜೆಸಿ ಮಾಧುಸ್ವಾಮಿ ಗೈರಾಗಿದ್ದಾರೆ. ಮಾಹಿತಿ ಪ್ರಕಾರ ಕೆ ಸುಧಾಕರ್ ವಿದೇಶ ಪ್ರವಾಸದಲ್ಲಿದ್ದಾರೆ. ಆದರೆ ಮಾಧುಸ್ವಾಮಿ ಹಾಗೂ ವಿ ಸೋಮಣ್ಣ ಗೈರು ಹಾಜರಾಗಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.
ಕೆ. ಸುಧಾಕರ್ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರು. ಆರೋಗ್ಯ ಸಚಿವರಾಗಿದ್ದ ಅವರು ಪ್ರಣಾಳಿಕೆ ಸಮಿತಿಯ ಸಂಚಾಲಕರೂ ಆಗಿದ್ದರು. ಆದರೆ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧದ ಸ್ಪರ್ಧೆಯಲ್ಲಿ ಸೋಲನ್ನು ಅನುಭವಿಸಿದ್ದರು. ಇನ್ನು ವಿ ಸೋಮಣ್ಣ ಕೂಡಾ ಪ್ರಭಾವಿ ಸಚಿವರಾಗಿದ್ದರು. ಗೋವಿಂದರಾಜ ನಗರದಲ್ಲಿ ಮತ್ತೆ ಸ್ಪರ್ಧೆ ಮಾಡಲು ಇಚ್ಛಿಸಿದ್ದ ಅವರಿಗೆ ಚಾಮರಾಜನಗರ ಹಾಗೂ ವರುಣಾದಲ್ಲಿ ಸ್ಪರ್ಧೆಗೆ ಸೂಚಿಸಲಾಗಿತ್ತು. ಆದರೆ ಎರಡೂ ಕಡೆಗಳಲ್ಲಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು.
ವಿ ಸೋಮಣ್ಣ ಹಾಗೂ ಕೆ ಸುಧಾಕರ್ ಸೋಲಿಗೆ ಪ್ರತಿಪಕ್ಷಗಳು ಕಾರಣವಾಗಿರುವ ಜೊತೆಗೆ ಪಕ್ಷದ ಕೆಲವರ ಕೈವಾಡವೂ ಇದೆ ಎಂಬ ಆರೋಪವನ್ನು ಅವರ ಆಪ್ತರು ಮಾಡುತ್ತಿದ್ದಾರೆ. ಒಳ ಏಟೇ ಸೋಲಿಗೆ ಕಾರಣ ಎಂಬ ವಾದವೂ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸೋಮಣ್ಣ, ಸುಧಾಕರ್ ಗೈರು ಕುತೂಹಲ ಕೆರಳಿಸಿದೆ.
ಸೋಲಿನ ಕಾರಣ ಬಿಚ್ಚಿಟ್ಟ ಪರಾಜಿತ ಅಭ್ಯರ್ಥಿಗಳು!
ಸೋಲಿನ ಪರಾಮರ್ಶೆ ಸಭೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳೇನು ಎಂಬ ವಿಚಾರಗಳನ್ನು ಪರಾಜಿತ ಅಭ್ಯರ್ಥಿಗಳು ನಾಯಕರ ಮುಂದೆ ಬಿಚ್ಚಿಟ್ಟಿದ್ದಾರೆ. ಸೋತ ಅಭ್ಯರ್ಥಿಗಳು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಡಳಿತ ವಿರೋಧಿ ಅಲೆ, 40% ಭ್ರಷ್ಟಾಚಾರ ಆರೋಪ, ಕಾಂಗ್ರೆಸ್ ಗ್ಯಾರಂಟಿ ಘೋಷಣೆ, ಟಿಕೆಟ್ ಹಂಚಿಕೆಯಲ್ಲಿ ವಿಳಂಬ, ಬಂಡಾಯ ಅಭ್ಯರ್ಥಿಗಳ ಎಫೆಕ್ಟ್, ರಾಷ್ಟ್ರೀಯ ನಾಯಕರ ಮೇಲಿನ ಅತಿಯಾದ ಅವಲಂಬನೆ ಸೋಲಿಗೆ ಕಾರಣ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ
ನಾಯಕರ ವಿರುದ್ಧವೇ ಗರಂ ಆದ ಎಂಟಿಬಿ!
ಸೋಲಿನ ಪರಾಮರ್ಶೆ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ನಾಯಕರ ವಿರುದ್ಧವೇ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ನಲ್ಲಿದ್ದಾಗ ಮೂರು ಸಲ ಗೆದ್ದಿದ್ದೆ.ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು. ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದು ಮಾಜಿ ಸಚಿವರೊಬ್ಬರ ಮೇಲೆ ಎಂಟಿಬಿ ಸಿಟ್ಟಾಗಿದ್ದಾರೆ.
ಕಾಂಗ್ರೆಸ್ ನವರು ಹತ್ತು ಕೆಜಿ ಅಕ್ಕಿ ಕೊಡ್ತಿದ್ದರು. ನಾವು ಆರು ಕೆಜಿ ಅಕ್ಕಿ ಕೊಟ್ಟೆವು, ಬಡವರು ಇದರಿಂದ ಸಿಟ್ಟಾಗಿದ್ರು. ನನ್ನ ಕ್ಷೇತ್ರದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಗ್ಯಾರಂಟಿಯೂ ನನ್ನ ಸೋಲಿಗೆ ಕಾರಣ ಎಂದು ಎಂಟಿಬಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.