ಬೆಂಗಳೂರು: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಭಾರತ್ ಮಾತೆ ಪರ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಕುರಿತು ಸಮಗ್ರ ವರದಿ ನೀಡಲು ಬಿಜೆಪಿಯಿಂದ ತಂಡ ರಚನೆ ಮಾಡಲಾಗಿದೆ. ಮಾಜಿ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ನೇತೃತ್ವದ ಐವರ ತಂಡ ರಚಿಸಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಆದೇಶ ಹೊರಡಿಸಿದ್ದಾರೆ. ಸಂಸದ ಪ್ರತಾಪ ಸಿಂಹ, ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕರಾದ ಹರ್ಷವರ್ಧನ್, ಎನ್.ಮಹೇಶ್ರನ್ನು ತಂಡ ಒಳಗೊಂಡಿದೆ.
ಇದೊಂದು ದುರಂಹಕಾರದ ಮಾತು: ಸಚಿವ ಎಂಬಿ ಪಾಟೀಲ್ ವಿರುದ್ಧ ಕಟೀಲ್ ಕಿಡಿ ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂಬಿ ಪಾಟೀಲ್ ಎಚ್ಚರಿಕೆ ವಿಚಾರವಾಗಿ ಮಂಗಳೂರಿನಲ್ಲಿ ಟಿವಿ9 ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ದುರಂಹಕಾರದ ಮಾತು. ಒಬ್ಬ ಸಚಿವರಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಧರ್ಮ. ಆದರೆ ರಾಷ್ಟ್ರದ ಹಿತಕ್ಕೆ ಕೆಲಸ ಮಾಡುವ ಚಕ್ರವರ್ತಿ ಸೂಲಿಬೆಲೆ ಬಗ್ಗೆ ದುರಂಹಕಾರದ ಮಾತನ್ನಾಡಿದ್ದಾರೆ. ಎಂ.ಬಿ ಪಾಟೀಲ್ಗೆ ತಾಕತ್ತು ಇದ್ರೆ ರಾಷ್ಟ್ರ ವಿರೋಧಿ ಕೃತ್ಯ ನಡೆಸಿದವರ ಬಂಧಿಸಲಿ ಎಂದಿದ್ದಾರೆ.
ರಾಷ್ಟ್ರ ವಿರೋಧಿಗಳನ್ನು ಮೊದಲು ಬಂಧಿಸಲಿ
ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರು ನಮ್ಮ ಸಹೋದರರು ಅಂತಾರೆ. ಪಾಕಿಸ್ತಾನಕ್ಕೆ ಜಿಂದಬಾದ್ ಹೇಳಿದವರು ಸಹೋದರರು ಅಂತಾರೆ. ರಾಷ್ಟ್ರಭಕ್ತರು ಯಾರು ರಾಷ್ಟ್ರ ವಿರೋಧಿಗಳು ಯಾರೆಂಬ ಕಲ್ಪನೆ ಇರಬೇಕು. ಇವರಿಗೆ ರಾಷ್ಟ್ರಭಕ್ತರೆಲ್ಲಾ ವಿರೋಧಿಗಳಾಗಿದ್ದಾರೆ.
ರಾಷ್ಟ್ರವಿರೋಧಿಗಳೆಲ್ಲಾ ಇವರ ಸಹೋದರರು ಪ್ರೇಮಿಗಳಾಗಿದ್ದಾರೆ. ಇದು ಯಾವ ನ್ಯಾಯ? ತಾಕತ್ ಇದ್ರೆ ರಾಷ್ಟ್ರ ವಿರೋಧಿಗಳನ್ನು ಮೊದಲು ಬಂಧಿಸಲಿ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ಹೇಳಿದ್ರೆ ಇವರು ದೊಡ್ಡ ಜನ ಆಗಲ್ಲ. ಸೂಲಿಬೆಲೆ ಏನು ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.
ಇದು ಮೂರ್ಖತನದ ಪರಮಾವಧಿ
ಗೋ ಹತ್ಯೆ ನಿಷೇಧ ಕಾಯ್ದೆ ವಾಪಾಸು ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ಮೂರ್ಖತನದ ಪರಮಾವಧಿ. ಮಂತ್ರಿಗಳಿಗೆ ಬೌದ್ದಿಕ ದಿವಾಳಿಯಾಗಿದೆ. ಗೋವಿನ ಬಗೆಗೆ ಪರಿಕಲ್ಪನೆ ಇಲ್ಲದೆ ಸಚಿವರು ಈ ಹೇಳಿಕೆ ನೀಡಿದ್ದಾರೆ. ಇದು ತುಷ್ಟೀಕರಣದ ನೀತಿಯ ಭಾಗ ಎಂದಿದ್ದಾರೆ.
ರಾಜ್ಯದ ಕೃಷಿಕರ ರೈತರ ಬಹುಜನರ ಬೇಡಿಕೆಯ ಆಧಾರದಲ್ಲಿ ಗೋ ಹತ್ಯೆ ನಿಷೇಧ ಕಾನೂನು ತಂದಿದ್ದೇವೆ. ಕಾಯ್ದೆ ವಾಪಸು ಪಡೆಯುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಈ ತುಷ್ಟೀಕರಣದ ನೀತಿಯನ್ನು ಬಿಜೆಪಿ ಖಂಡಿಸುತ್ತೆ. ಇದರ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.