ಬೆಂಗಳೂರು: ಸಿದ್ದರಾಮಯ್ಯ 5 ವರ್ಷ ಸಿಎಂ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್ ಗರಂ ಆಗಿದ್ದಾರೆ. ಇದೇ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ. ಮಂಗಳವಾರ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ರಾಜ್ಯದ ಮಹಾಜನತೆಗೆ ‘ಗ್ಯಾರಂಟಿಗಳ’ ಹೆಸರಿನಲ್ಲಿ ವಂಚಿಸಿ ಇದೀಗ ಪರಸ್ಪರ ಗುದ್ದಾಟ ನಡೆಸುತ್ತಿದೆ! ನಿನ್ನೆ ಮುಖ್ಯಮಂತ್ರಿಗಳ ಬಣದಿಂದ ಸಚಿವರಾದ ಎಂ.ಬಿ.ಪಾಟೀಲ್ ಎಚ್ಚರಿಕೆ ರವಾನಿಸಿದ್ದರು! ಅದಕ್ಕೆ ಪ್ರತ್ಯುತ್ತರವಾಗಿ ಇಂದು ಉಪಮುಖ್ಯಮಂತ್ರಿಗಳ ಬಣದಿಂದ ಸಂಸದ ಡಿ.ಕೆ.ಸುರೇಶ್ ನೇರ ಬಾಣ ತಿರುಗಿಸಿದ್ದಾರೆ. ಮನೆಯೊಂದು, ಮೂರು ಬಣ, ಮೂವತ್ತು ಬಾಗಿಲಿನ ಈ #ATMSarkaraದ ವಿರುದ್ಧ ಕರ್ನಾಟಕದ ಮಹಾಜನತೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ!’ ಎಂದು ಕುಟುಕಿದೆ.
#SidduVsDKSVsCong ಹ್ಯಾಶ್ಟ್ಯಾಗ್ ಬಳಸಿ ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ‘ಸಿಎಂ ಆಯ್ಕೆಯ ಕಸರತ್ತು ಮುಗಿದ ಬೆನ್ನಲ್ಲೇ, ಸಿಎಂ ವ್ಯಾಲಿಡಿಟಿಯ ಬಗ್ಗೆ ಚರ್ಚೆ ಹುಟ್ಟಿತು. ಈಗ ಸಚಿವ ಸಂಪುಟ ವಿಸ್ತರಣೆಯ ಜಟಾಪಟಿ 2 ಬಣಗಳ ನಡುವೆ ತೀವ್ರವಾಗಿದೆ. ಆದರೆ #ATMSarkaraಕ್ಕಾಗಲಿ, ಸಿದ್ಧರಾಮಯ್ಯನವರಿಗಾಗಲಿ, ಡಿ.ಕೆ.ಶಿವಕುಮಾರರಿಗಾಗಲಿ ನಾಡ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಲು ಯಾವುದೇ ಆಸಕ್ತಿಯೂ ಇಲ್ಲ, ಉತ್ಸಾಹವೂ ತೋರಿಸುತ್ತಿಲ್ಲ’ ಎಂದು ಟೀಕಿಸಿದೆ.
ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವುದು ಇಲ್ಲ, ಅವರನ್ನು ಆಗಲು ಸಿದ್ದರಾಮಯ್ಯನವರು ಬಿಡುವುದು ಇಲ್ಲ. ಎಂ.ಬಿ.ಪಾಟೀಲ್ರು ಈ ಹೇಳಿಕೆಯ ಮೂಲಕ ಡಿಕೆಶಿಯವರಿಗೆ ನೇರವಾದ ಎಚ್ಚರಿಕೆಯನ್ನು ರವಾನಿಸಿದ್ದಾರಷ್ಟೇ! ಅದೇನೆ ಇದ್ದರೂ ಬಹುಮತ ದೊರಕಿದ ನಂತರದ ಈವರೆಗಿನ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ,
ಈ ಸರ್ಕಾರ ಸುಸ್ತಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ, ಗ್ಯಾರಂಟಿಯೂ ಇಲ್ಲ. ದೆಹಲಿಯ ತಮ್ಮ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಈ #ATMSarkara ರಚನೆಯಾಗಿರುವುದು ಮತ್ತು ಅದಷ್ಟೇ ಇದರ ಆದ್ಯತೆಯಾಗಿರುವುದು ರಾಜ್ಯದ ದುರಂತ!’ವೆಂದು ಬಿಜೆಪಿ ಟೀಕಿಸಿದೆ.