ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಹಾಲಿ ಶಾಸಕರು ರಾಜೀನಾಮೆ ನೀಡಿ ಬೇರೆ-ಬೇರೆ ಪಕ್ಷಗಳತ್ತ ಮುಖಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ಬಿಜೆಪಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಇಂದು( ಮಾರ್ಚ್ 31) ಒಂದೇ ದಿನ ಇಬ್ಬರು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬೇರೊಂದು ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ.
ಹೌದು ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಇಂದು ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಮತ್ತೊಂದೆಡೆ ಅರಕಲಗೂಡು ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ9AT ಅವರು ಸಹ ರಾಜೀನಾಮೆ ನೀಡಿದ್ದು, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಯವರಿಗೆ ರಾಜೀನಾಮೆ ಪತ್ರ ನೀಡಿದರು. ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರಿಸಿದ ರಾಮಸ್ವಾಮಿ ಹಾಸನ ಜಿಲ್ಲೆಯ ಅರಕಲಗೂಡು ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಸ್ಫೀಕರ್ ಕಚೇರಿಯಲ್ಲಿ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಪತ್ರ ನೀಡಿದರು. ಬಳಿಕ ಆಚೆ ಬಂದು ವಿಧಾನಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿ ಗಮನಸೆಳೆದರು.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಮಸ್ವಾಮಿ, ಸಂತೋಷದಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜೆಡಿಎಸ್ಗೆ ಧನ್ಯವಾದ. ನಾನು ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ನಾನು ಶಾಸಕನಾಗಿದ್ದಾಗ ಜನಪರವಾದ ಕೆಲಸ ಮಾಡಿದ್ದೇನೆ. ನಾನು ಸರಿ ಇದ್ರೆ ಸರಿ, ತಪ್ಪಾಗಿದ್ದರೆ ತಪ್ಪು ಎಂದು ಹೇಳಿದ್ದಾನೆ. ನಾನು ಜೆಡಿಎಸ್ ಬಿಟ್ಟೆ ಎಂದು ಎಲ್ಲೂ ಹೇಳಿಲ್ಲ. ಜೆಡಿಎಸ್ನವರೇ ನನ್ನನ್ನು ಹೊರ ಹಾಕಿದರು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು ಎಂದು ಅಸಮಾಧಾನ ಹೊರಹಾಕಿದರು.
ಈಗಾಗಲೇ ಅರಕಲಗೂಡು ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ಎ ಮಂಜು ಅವರನ್ನು ಅಂತಿಮಗೊಳಿಸಲಾಗಿದೆ. ಹೀಗಾಗಿ ರಾಮಸ್ವಾಮಿ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರಬೇಕು ಎನ್ನುವ ಚಿಂತನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ರಾಮಸ್ವಾಮಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ಹೆಚ್ಚಿವೆ.
ಸ್ಪೀಕರ್ ಕಾಗೇರಿಗೆ ಗೋಪಾಲ ಕೃಷ್ಣ ರಾಜೀನಾಮೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಿಜೆಪಿ ಶಾಸಕ ಗೋಪಾಲ ಕೃಷ್ಣ ಸಹ ಅಧಿಕೃತ ತಮ್ಮ ಶಾಸಕ ಸ್ಥಾನ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಜತೆ ಶಿರಸಿಗೆ ಹೋಗಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಅವರಿಗೆ ರಾಜೀನಾಮೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನು ರಾಜೀನಾಮೆ ಬಳಿಕ ಟಿವಿ9 ಜೊತೆ ಮಾತನಾಡಿದ ಗೋಪಾಲ ಕೃಷ್ಣ, ನನಗೆ ಬಿಜೆಪಿಯಿಂದ ಬೇಜಾರಾಗಿಲ್ಲ. ಮನಸಿಗೆ ನೋವಾಗಿಲ್ಲ. ಪಕ್ಷ ಎಲ್ಲ ಸಹಾಯ ಮಾಡಿದೆ. ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನಾನೇನು ಟಿಕೆಟ್ ಗಾಗಿ ಬೇಡಿಕೆ ಇಟ್ಟಿಲ್ಲ. ಕಾಂಗ್ರೆಸ್ ಟಿಕೆಟ್ ಕೊಟ್ಟರೇ ನೋಡೋಣ ಎಂದಯ ಪರೋಕ್ಷವಾಗಿ ಈ ಬಾರಿಯೂ ಚುನಾವಣೆ ಅಖಾಡಕ್ಕಿಳಿಯುವುದಾಗಿ ಹೇಳಿದರು.
ರಾಜೀನಾಮೆ ಸರದಿಯಲ್ಲಿ ಮತ್ತೋರ್ವ ಶಾಸಕ
ಹೌದು..ಇಂದು ಇಬ್ಬರು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡಿದ್ದಾರೆ. ಇನ್ನು ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸಹ ರಾಜೀನಾಮೆ ನೀಡುವ ಸರದಿಯಲ್ಲಿದ್ದಾರೆ. ಈಗಾಗಲೇ ಅವರು ಕಾಂಗ್ರೆಸ್ ಸೇರುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಅಥವಾ ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡುವ ಸಾಧ್ಯತೆಗಳಿವೆ. ಇನ್ನು ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಸಹ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಿನ್ನೆ ಅಷ್ಟೇ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.