ಯಾದಗಿರಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಟಿಕೆಟ್ ಆಕಾಂಕ್ಷಿಗಳು ಗಿಫ್ಟ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಭೀಮಣ್ಣ ಮೇಟಿ ಅವರಿಂದ ಗಿಫ್ಟ್ ಪಾಲಿಟಿಕ್ಸ್ ಭರ್ಜರಿಯಾಗಿ ನಡೆದಿದೆ. ಈ ಬಾರಿ ಟಿಕೆಟ್ ಸಿಕ್ಕರೆ ಗೆಲ್ಲಲು ಪಣ ತೊಟ್ಟಿರುವ ಡಾ.ಭೀಮಣ್ಣ ಅದಕ್ಕಾಗಿ ಈಗಿನಿಂದಲೇ ಮತದಾರರನ್ನು ತನ್ನತ್ತ ಸೆಳೆದುಕೊಳ್ಳಲು ಗಿಫ್ಟ್ ಕೊಡುವ ಮೂಲಕ ಕಸರತ್ತು ನಡೆಸಿದ್ದಾರೆ.
ಡಾ.ಭೀಮಣ್ಣ ಫೌಂಡೇಶನ್ ವತಿಯಿಂದ ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಿಗೆ ಕಿಟ್ ವಿತರಣೆ ಮಾಡಲಾಗಿದೆ. ಅಪೌಷ್ಟಿಕ ನಿವಾರಣೆಗೆ ಆಹಾರ ಕಿಟ್ ವಿತರಣೆ ಎಂದು ಹೇಳಲಾಗುತ್ತಿದೆಯಾದರೂ ಇಲ್ಲಿ ಮುಂಬರುವ ಚುನಾವಣೆಗೆ ಡಾ.ಭೀಮಣ್ಣ ಮೇಟಿ ತಯಾರಿ ನಡೆಸುತ್ತಿರುವುದು ಎದ್ದು ಕಾಣುತ್ತಿದೆ.
ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ:
ಡಾ.ಭೀಮಣ್ಣ ಫೌಂಡೇಶನ್ ಮೂಲಕ ಕಳೆದ ನಾಲ್ಕು ದಿನಗಳಿಂದ ಮನೆ ಮನೆಗಳಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿದ್ದಾರೆ. ಅದರಲ್ಲೂ ಗರ್ಭಿಣಿಯರು, ಮಕ್ಕಳ ಇರುವ ಮನೆಗೆ ಶೇಂಗಾ, ಬೆಲ್ಲ, ಹೆಸರು, ಗೋಧಿ ರವಾ ಇರುವ ಪೌಷ್ಟಿಕ ಆಹಾರ ಕೀಟ್ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ವಡಗೇರಾ, ಹಯ್ಯಾಳ, ದೋರನಹಳ್ಳಿ ಸೇರಿದಂತೆ ಮೊದಲಾದ ಕಡೆ ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡಲಾಗಿದೆ.
ಕಳೆದ ತಿಂಗಳು ಡಾ.ಭೀಮಣ್ಣ ಮೇಟಿ ಅವರಿಂದ ಆರೋಗ್ಯ ತಪಾಸಣೆ ಶಿಬಿರ, ಕೊವೀಡ್ ಸಂದರ್ಭದಲ್ಲಿ ಬಡಜನರಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿತ್ತು. ಇದೀಗ ಚುನಾವಣೆ ಸಮೀಪಿಸುತ್ತಿರುವುದರಿಂದ ಮತ್ತೊಮ್ಮೆ ಆಹಾರ ಕಿಟ್ ವಿತರಿಸುವ ಮೂಲಕ ಮತದಾರರನ್ನು ತನ್ನತ್ತ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.