ಕೂಗು ನಿಮ್ಮದು ಧ್ವನಿ ನಮ್ಮದು

ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾದ ಬೆಳಗಾವಿ ಹುಡುಗ: ಚಿನ್ನದ ಪದಕವನ್ನು ಗೆಲ್ಲುವ ಹುಮ್ಮಸ್ಸಿನಲ್ಲಿ ಅತುಲ್ ಶಿರೋಳೆ

ಬೆಳಗಾವಿ: ನಾಗಾಲ್ಯಾಂಡನಲ್ಲಿ ನಡೆಯಲಿರುವ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಬೆಳಗಾವಿಯ ಹೆಮ್ಮೆಯ ಅತುಲ್ ಸುರೇಶ ಶಿರೋಳೆ ಆಯ್ಕೆಯಾಗುವ ಮೂಲಕ ಬೆಳಗಾವಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಬೆಳಗಾವಿ ತಾಲೂಕಿನ ಮುಚ್ಚಂಡಿಯ ಕುಸ್ತಿಪಟು ಅತುಲ್ ಸುರೇಶ ಶಿರೋಳೆ, ಕುಸ್ತಿಯಲ್ಲಿ ಒಂದೊಂದೆ ಮೆಟ್ಟಿಲನ್ನು ಹತ್ತುತ್ತಾ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ. ಈಗಾಗಲೇ ಅನೇಕ ಪಂದ್ಯಾವಳಿಯಲ್ಲಿ ಭಾಗಿಯಾಗಿ ತನ್ನ ಶಕ್ತಿ ಸಾಮರ್ಥ್ಯ ಸಾಬೀತು ಮಾಡಿರುವ ಅತುಲ್ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಇದೀಗ ಮತ್ತೊಂದು ಪಂದ್ಯಾವಳಿಗೆ ಸಾಕಷ್ಟು ತಾಲೀಮು ನಡೆಸುತ್ತಿದ್ದಾರೆ.

ಸಧ್ಯ ನಾಗಾಲ್ಯಾಂಡನಲ್ಲಿ ನಡೆಯಲಿರುವ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೂ ಆಯ್ಕೆಯಾಗುವ ಮೂಲಕ ಬೆಳಗಾವಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ್ರೂ ಕೂಡ ಕುಸ್ತಿಯಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂಬ ಕನಸು ಕಂಡಿರುವ ಅತುಲ್ ಶಿರೋಳೆ ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಕಠಿಣ ಅಭ್ಯಾಸ ಮಾಡುತ್ತಾರೆ. ಅಷ್ಟೊಂದು ಸೌಲಭ್ಯ, ಸೌಕರ್ಯ ಇಲ್ಲದಿದ್ದರೂ ಸ್ವಂತ ಶಕ್ತಿಯ ಮೇಲೆ ಕುಸ್ತಿಯಲ್ಲಿ ಹೊಸ ಇತಿಹಾಸ ಬರೆಯಬೇಕು ಎಂಬ ಮಹದಾಸೆ ಹೊಂದಿದ್ದಾರೆ. ಇನ್ನು ಅತುಲ್ ಶಿರೋಳೆ ಅಜ್ಜ ಮತ್ತು ತಂದೆ ಕೂಡ ಪ್ರಸಿದ್ಧ ಕುಸ್ತಿಪಟುಗಳು. ಕುಸ್ತಿ ಕಲೆ ಅತುಲ್ ರಕ್ತದಲ್ಲಿಯೇ ಹರಿದು ಬಂದಿದೆ. ಹೀಗಾಗಿ ಅತುಲ್ ಕೂಡ ಕುಸ್ತಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ನ್ಯೂಸ್90 ಕರ್ನಾಟಕ ಜೊತೆಗೆ ಮಾತನಾಡಿರುವ ಅತುಲ್ 2016 ರಲ್ಲಿ ರಷಿಯಾದ ಜಾರ್ಜಿಯಾದಲ್ಲಿ ಕೆಡೆಟ್ ವರ್ಲ್ಡ್ ಚಾಂಪಿಯನ್‍ಶಿಪ್‍ನಲ್ಲಿ ಪದಕ ಗೆದ್ದಿದ್ದೇನೆ. 2017 ರಲ್ಲಿ ತುರ್ಕಸ್ಥಾನದಲ್ಲಿ ನಡೆದ ಏಶಿಯನ್ ಗೇಮ್ಸನಲ್ಲಿ 5ನೇ ಸ್ಥಾನ ಪಡೆದಿದ್ದೇನೆ. 2019ರಲ್ಲಿ ಸೌಥ್ ಕೊರಿಯಾದ ಸಿನಿಯರ್ ವರ್ಲ್ಡ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದೇನೆ. ಈಗ ನಾಗಾಲ್ಯಾಂಡ್‍ನಲ್ಲಿ ಚಿನ್ನದ ಪದಕ ಗೆಲ್ಲುವ ಆಸೆಯಿದೆ. ನನಗೆ ಮರಾಠ ಮಂಡಳ ಸಂಸ್ಥೆಯ ಅಧ್ಯಕ್ಷೆ ರಾಜೇಶ್ವರಿ ಹಲಗೇಕರ್ ಸೇರಿ ಬೆಳಗಾವಿಯ ಅನೇಕ ಜನರು ಬಹಳಷ್ಟು ಸಹಾಯ, ಸಹಕಾರ ಮಾಡಿದ್ದಾರೆ. ಇದೇ ರೀತಿ ತಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ನಾಗಾಲ್ಯಾಂಡ್‍ಗೆ ಪ್ರಯಾಣ ಬೆಳೆಸುತ್ತಿರುವ ಅತುಲ್ ಶಿರೋಳೆ ಅವರಿಗೆ ನಾವೆಲ್ಲರೂ ಕೂಡ ಬೆಸ್ಟ್ ಆಫ್ ಲಕ್ ಹೇಳೋಣ. ಚಿನ್ನದ ಪದಕ ಗೆದ್ದು ರಾಜ್ಯ, ರಾಷ್ಟ್ರ ಮತ್ತು ಕುಂದಾನಗರಿ ಬೆಳಗಾವಿಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸೋಣ.

error: Content is protected !!